ದೊಡ್ಡಬಳ್ಳಾಪುರ : ನಗರದ ಎಪಿಎಂಸಿ ಆವರಣದ ರೈತ ಸಂಪರ್ಕ ಕೇಂದ್ರದ ರಾಗಿ ಖರೀದಿ ನೋಂದಣಿ ಕೇಂದ್ರ ಹಾಗೂ ನಗರದ ಚಿಕ್ಕಬಳ್ಳಾಪುರ ರಸ್ತೆ ಸರ್ಕಾರಿ ತಾಯಿ&ಮಗು ಆಸ್ಪತ್ರೆ ಸಮೀಪವಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರನ್ನು ದಿನಗಟ್ಟಲೇ ಕಾಯಿಸದೆ ರೈತರು ತಂದ ರಾಗಿ ಕೇಂದ್ರದಲ್ಲಿ ಖರೀದಿ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ರಾಗಿ ನೋಂದಣಿ ಹಾಗೂ ಖರೀದಿ ವಿವರ ಪರಿಶೀಲಿಸಿದ ಡಿಸಿ, ತೂಕ ಹಾಗೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕಿದೆ ಎಂದರು. ತಾಲೂಕಿನ ರಾಗಿ ಖರೀದಿ ಕೇಂದ್ರದ ಅಧಿಕಾರಿ ಎಚ್.ಎನ್.ನಾರಾಯಣ ಮಾತನಾಡಿ, ರಾಗಿ ಖರೀದಿಗೆ ಜೂ.30 ಕೊನೆ ದಿನವಾಗಿದೆ. ಕಚೇರಿಯಿಂದ ದೂರವಾಣಿ ಕರೆ ಮಾಡಿದ ರೈತರು ನಿಗದಿತ ವೇಳೆಗೆ ಬಂದು ರಾಗಿ ಚೀಲಗಳನ್ನು ಖರೀದಿ ಕೇಂದ್ರದಲ್ಲಿ ನೀಡಬೇಕಿದೆ. ಉಗ್ರಾಣದಲ್ಲಿ ನಿತ್ಯ 70&80 ಟ್ರಾ$್ಯಕ್ಟರ್ಗಳಿಂದ ಖರೀದಿಸುವ ಸಾಮರ್ಥ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ನಿರ್ವಹಣೆ ಕಷ್ಟವಾಗುತ್ತದೆ. ಖರೀದಿ ಕೇಂದ್ರ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.