ಜಿಲ್ಲೆ

ಪ್ರಮಾಣಪತ್ರ ವಿತರಣೆ ರಾಜಸ್ವ ನಿರೀಕ್ಷಕರಿಗೆ ಹೊಣೆ: ಜಿಲ್ಲಾಧಿಕಾರಿ ಡಾ.ಕುಮಾರ ತುರ್ತು ಆದೇಶ

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಮಾಣಪತ್ರ ಪಡೆಯಲು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸಧ್ಯದ ಮಟ್ಟಿಗೆ ಪ್ರಮಾಣಪತ್ರ ವಿತರಣೆ ಮಾಡುವ ಹೊಣೆಯನ್ನು ರಾಜಸ್ವ ನಿರೀಕ್ಷಕರಿಗೆ ವಹಿಸಿ ಜಿಲ್ಲಾಧಿಕಾರಿ ಡಾ.ಕುಮಾರ ತುರ್ತು ಆದೇಶ ಹೊರಡಿಸಿದ್ದಾರೆ.

ಗ್ರಾಮ ಆಡಳಿತ ಅಧಿಕಾರಿಗಳು ೆ.10ರಿಂದ ಕರ್ತವ್ಯಕ್ಕೆ ಹಾಜರಾಗದೇ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಪರಿಣಾಮ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಪ್ರವೇಶ ಪರೀಕ್ಷೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಅರ್ಜಿ ಸಲ್ಲಿಸಲು ಅಡಚಣೆಯುಂಟಾಗಿದೆ. ಆದ್ದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್‌ನಲ್ಲಿ ಕ್ಷೇತ್ರ ಪರಿಶೀಲನೆ ಬಾಕಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಕೋರಿಕೆಯ ಅರ್ಜಿ ಹಾಗೂ ಮುಂದೆ ಸ್ವೀಕೃತವಾಗುವ ಹೊಸ ಅರ್ಜಿಗೆ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷಕರು ಕ್ಷೇತ್ರ ತಪಾಸಣೆ ನಡೆಸಬೇಕು. ಮಾತ್ರವಲ್ಲದೆ ಪ್ರಮಾಣ ಪತ್ರ ವಿತರಿಸುವಂತೆ ಸೂಚಿಸಲಾಗಿದೆ. ಜತೆಗೆ ಸಾರ್ವಜನಿಕರು ಪ್ರಮಾಣ ಪತ್ರವನ್ನು ಪಡೆಯಲು ಆಯಾಯ ತಹಸೀಲ್ದಾರ್ ಕಚೇರಿಯನ್ನು ಸಂಪರ್ಕಿಸಬಹುದು. ಪ್ರಮಾಣಪತ್ರ ಪಡೆಯುವುದಕ್ಕೆ ಸಂಬಂಧಿಸಿದಂತೆ ಅಡಚಣೆಯಾದಲ್ಲಿ ಸಹಾಯವಾಣಿ ಸಂಖ್ಯೆ 8277862938 ಯನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಲೂಕು ಕಚೇರಿಗೆ ಭೇಟಿ: ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಂಡ್ಯ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿ ಸ್ವೀಕರಿಸಿ ಕಾನೂನು ರೀತ್ಯ ವಿಲೇವಾರಿ ಮಾಡಬೇಕು. ತಾಲೂಕು ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿ ಕಡತ ವಿಲೇವಾರಿ ಕುರಿತು ಮಾಹಿತಿ ಪಡೆದುಕೊಂಡು ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿಯಾಗಬೇಕು. ವಿನಾಕರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಬಾರದು ಎಂದು ಸೂಚನೆ ನೀಡಿದರು.

ಗ್ರಾಮ ಆಡಳಿತಾಧಿಕಾರಿಗಳ ಕೆಲಸ ಪ್ರಮುಖವಾಗಿದ್ದು, ಅವರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಹಿನ್ನಲೆ ವಿದ್ಯಾರ್ಥಿಗಳಿಗೆ ಜಾತಿ, ಆದಾಯ ಪ್ರಮಾಣ ಪತ್ರ ನೀಡಲು ತೊಂದರೆಯಾಗುತ್ತಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಆನ್‌ಲೈನ್ ಮೂಲಕ ಗ್ರಾಮ ಆಡಳಿತಾಧಿಕಾರಿಗೆ ಸಲ್ಲಿಸಿರುವ ಅರ್ಜಿಯನ್ನು ಕಂದಾಯ ನಿರೀಕ್ಷಕರ ಲಾಗ್‌ಇನ್‌ಗೆ ವರ್ಗಾಯಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತುರ್ತಾಗಿ ಆದಾಯ ಅಥವಾ ಜಾತಿ ಪ್ರಮಾಣ ಪತ್ರ ಬೇಕಿದ್ದಲ್ಲಿ ನೀಡಲು ಸಹಾಯವಾಣಿ ಸಹ ತೆರೆಯಲಾಗಿದೆ ಎಂದರು.

ಇದೇ ವೇಳೆ ಡಿಸಿ ಕಡತಗಳ ಗಣಕೀಕರಣ ಕೆಲಸಗಳನ್ನು ಸಹ ಪರಿಶೀಲಿಸಿದರು. ಅಂತೆಯೇ ಮುಷ್ಕರ ನಿರತ ಗ್ರಾಮ ಆಡಳಿತಾಧಿಕಾರಿಗಳಿಂದ ಮನವಿ ಸ್ವೀಕರಿಸಿದರು. ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಇತರರಿದ್ದರು.