ಬೆಂಗಳೂರು ಗ್ರಾಮಾಂತರ: ಕರೊನಾ 2ನೇ ಅಲೆಯ ತೀವ್ರತೆ ಕಡಿಮೆ ಆಗುತ್ತಿರುವಂತೆ ಜಿಲ್ಲೆಯ ಆಡಳಿತದೆಡೆಗೆ ಅಧಿಕಾರಿಗಳು ಗಮನ ಕೊಡಲಾರಂಭಿಸಿದ್ದಾರೆ. ಸೋಂಕಿನ ನಿಯಂತ್ರಣದತ್ತ ಗಮನಹರಿಸಿದ್ದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಇದೀಗ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪುನರಾರಂಭಿಸಲು ಮುಂದಾಗಿದ್ದಾರೆ.
ಕರೊನಾಕ್ಕೂ ಮೊದಲು ಅಭೂತಪೂರ್ವ ಆರಂಭ ಪಡೆದುಕೊಂಡಿದ್ದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದರಿಂದ, ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಇದ್ದ ರೈತರ ಹಲವು ಸಮಸ್ಯೆಗಳು ಪರಿಹಾರಗೊಂಡಿದ್ದವು. ಆದರೆ, ಸೋಂಕಿನಿಂದಾಗಿ ಸ್ಥಗಿತವಾಗಿದ್ದ ಈ ಕಾರ್ಯಕ್ರಮವನ್ನು ಪುನರಾರಂಭಿಸುವಂತೆ ವಿವಿಧ ರೈತಪರ ಸಂಘಟನೆಗಳು ಜಿಲ್ಲಾಧಿಕಾರಿ ಮೊರೆ ಹೋಗಿದ್ದರು. ಅದಕ್ಕೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅಸ್ತು ಎಂದಿದ್ದಾರೆ. ಶೀಘ್ರದಲ್ಲೇ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.
ಕಂದಾಯ ಕಿತಾಪತಿ : ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಕಚೇರಿಗಳಿಗೆ ಅಲೆಯುವುದು ಸಾಮಾನ್ಯ ಎಂಬ ಪರಿಸ್ಥಿತಿ ಇದೆ. ಅದೆಷ್ಟೋ ಬಾರಿ ಅಧಿಕಾರಿ ಹಾಗೂ ಸಿಬ್ಬಂದಿ ದರ್ಶನ ಭಾಗ್ಯವೂ ದುರ್ಲಭವಾಗುತ್ತಿದೆ. ಸರ್ವೇ, ಕಂದಾಯ, ಇ-ಖಾತೆ, ಖಾತೆ ಬದಲಾವಣೆ, ಆಸ್ತಿ ನೋಂದಣಿ ಸೇರಿ ಅನೇಕ ಪ್ರಕ್ರಿಯೆಗಳಿಗೆ ವೇಗ ಸಿಗುತ್ತಿಲ್ಲ. ಇದರಿಂದ ಕಂಗಾಲಾಗಿರುವ ರೈತರು ಏಕಗವಾಕ್ಷಿ ಮೂಲಕ ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಡಬೇಕೆಂಬ ಒತ್ತಡ ಹೇರಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ತಾಲೂಕುವಾರು ರೈತ ಮುಖಂಡರ ಸಭೆ ಆಯೋಜಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಿದ್ದಾರೆ.
ಕೃಷಿ ಹಾಗೂ ತೋಟಗಾರಿಕೆಗೂ ಬೇಕು ಆಪರೇಷನ್: ಕರೊನಾ ಕಾರಣದಿಂದ ಕಂಗೆಟ್ಟಿರುವ ರೈತರು ಕೃಷಿ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಸಮರ್ಪಕ ಮಾಹಿತಿ, ಯೋಜನೆಗಳ ಲಾಭದಿಂದ ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ 2ನೇ ಸ್ಥಾನದಲ್ಲಿರುವ ತೋಟಗಾರಿಕೆ ಕ್ಷೇತ್ರವೂ ತೀವ್ರ ಹಿನ್ನಡೆಗೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಇಲಾಖೆಗಳಿಗೆ ಸಂಬಂಧಿಸಿದಂತೆ ರೈತರ ಸಭೆ ಆಯೋಜಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಈ ವಿಷಯದಲ್ಲಿ ವಿಳಂಬ ಅನುಸರಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗುವುದು. ಎಂಟಿಬಿ ನಾಗರಾಜ್, ಜಿಲ್ಲಾ ಉಸ್ತುವಾರಿ ಸಚಿವ ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲು ತಾಲೂಕುವಾರು ರೈತರ ಸಭೆ ಆಯೋಜಿಸುವ ಚಿಂತನೆ ಇದೆ. ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ ಜಿಲ್ಲಾಮಟ್ಟದಲ್ಲಿ ರೈತರ ಸಭೆ ನಡೆಸುವಂತೆ ರೈತಪರ ಸಂಘಟನೆಗಳು ಮನವಿ ಮಾಡಿವೆ. ಆದರೆ ಕರೊನಾ ಕಾರಣದಿಂದ ಒಟ್ಟಿಗೆ ಸಭೆ ಆಯೋಜಿಸಲಾಗದು. ಆದ್ದರಿಂದ ತಾಲೂಕುವಾರು ಸಭೆ ಆಯೋಜಿಸುವ ಬಗ್ಗೆ ಜಿಲ್ಲಾಧಿಕಾರಿ ಚಿಂತನೆ ನಡೆಸಿದ್ದಾರೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಡಾ. ಜಗದೀಶ್ ಕೆ.ನಾಯಕ್, ಅಪರ ಜಿಲ್ಲಾಧಿಕಾರಿ