ಮಂಡ್ಯ: ಭೂ ಹಿಡುವಳಿ ಹೊಂದಿರುವ ಖಾತೆದಾರರ ರೈತರ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಆಧಾರ್ ಸೀಡಿಂಗ್ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ತಾಲೂಕು ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 21 ಲಕ್ಷ ಖಾತೆದಾರ ರೈತರಿದ್ದಾರೆ. ಈ ಪೈಕಿ 1.10 ಲಕ್ಷ ರೈತರ ಆಧಾರ್ ಸೀಡಿಂಗ್ ಮುಕ್ತಾಯವಾಗಿದ್ದು, ಉಳಿದ ರೈತರ ಆಧಾರ್ ಕಾರ್ಡ್ ಲಿಂಕ್ ಕಾರ್ಯಕ್ರಮವನ್ನು ಜೂನ್ ಒಳಗೆ ಪೂರ್ಣಗೊಳಿಸಬೇಕು. ಇನ್ನು ಕಂದಾಯ ಗ್ರಾಮಗಳಲ್ಲಿ ಸುಮಾರು 4 ಸಾವಿರ ಜನರಿಗೆ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗುತ್ತಿದೆ. ಮಂಡ್ಯ ತಾಲೂಕು ಆಡಳಿತದಿಂದ 419 ಜನರಿಗೆ ಹಕ್ಕುಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ಜಿಲ್ಲಾಡಳಿತ ಆದ್ಯತೆಯಾಗಿ ಕೈಗೆತ್ತಿಕೊಂಡಿರುವ ಕಂದಾಯ ಮೊಕದ್ದಮೆಗಳ ವಿಲೇವಾರಿ ತೀವ್ರ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸುಮಾರು 11 ಸಾವಿರ ಮೊಕದ್ದಮೆಗಳ ಪೈಕಿ 9,500 ಮೊಕದ್ದಮೆ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಪೌತಿ ಖಾತೆಗಳ ಪೈಕಿ 18 ಸಾವಿರ ಪೌತಿ ಖಾತೆಗಳನ್ನು ಇತ್ಯರ್ಥ ಪಡಿಸಲಾಗಿದ್ದು, ನಿಗದಿತ ಸಮಯದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮುಗಿಸುವಂತೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ರಸ್ತೆ ಬದಿ ಮರಗಳನ್ನು ತೆರವುಗೊಳಿಸಲು ಹಾಗೂ ಮಳೆ ಮತ್ತು ಬಿರುಗಾಳಿಗೆ ಉರುಳಿ ಬಿದ್ದ ಮರಗಳನ್ನು ಕೂಡಲೇ ತೆರವು ಮಾಡಬೇಕು. ಪ್ರತಿ ತಾಲೂಕು ಮಟ್ಟದಲ್ಲಿ ಕಂದಾಯ, ಅರಣ್ಯ, ವಿದ್ಯುತ್, ಅಗ್ನಿಶಾಮಕ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಪೋರ್ಸ್ ರಚಿಸಲಾಗುವುದೆಂದು ವಿವರಿಸಿದರು.
ಈ ವೇಳೆ ಕಚೇರಿಯಲ್ಲಿ ಹಾಜರಿದ್ದ ಸಾರ್ವಜನಿಕರ ಕುಂದು ಕೊರತೆ ಆಲಿಸಿದ ಜಿಲ್ಲಾಧಿಕಾರಿ, ಕೆರಗೋಡು ಗ್ರಾಮದ ಮಹಿಳೆ ಸುಧಾ ಎಂಬುವವರು ರಸ್ತೆ ಒತ್ತುವರಿ ತೆರವು ಮಾಡಿಸುವಂತೆ ಹಾಗೂ ಮಳೆಯಿಂದ ಹಾನಿಗೊಳಗಾಗಿರುವ ಮನೆ ನಿರ್ಮಾಣಕ್ಕೆ ನೆರವಾಗುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿ, ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಲು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್‌ಗೆ ಸೂಚಿಸಿದರು. ಅಂತೆಯೇ ಸಾರ್ವಜನಿಕರ ಪಡಿತರ ಚೀಟಿ ಸಮಸ್ಯೆ, ಆರ್‌ಟಿಸಿ ತಿದ್ದುಪಡಿ ಹಾಗೂ ಕಂದಾಯ ಇಲಾಖೆ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸುವಂತೆ ಸೂಚಿಸಿದರು.
ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್, ಎಡಿಎಲ್ಆರ್ ಮಮತಾ, ಭೂಮಿ ಶಾಖೆ ಸಲಹೆಗಾರ ಲೋಹಿತ್, ಗ್ರಾಮ ಲೆಕ್ಕಾಧಿಕಾರಿ ತೇಜಸ್‌ಗೌಡ ಇತರರಿದ್ದರು.