ಚನ್ನಪಟ್ಟಣ: ತಾಲೂಕಿನ ಇಗ್ಗಲೂರು, ಕೂಡ್ಲೂರು, ಮಳೂರು ಗ್ರಾಪಂ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಶುಕ್ರವಾರ ಭೇಟಿ ನೀಡಿ, ಕೇಂದ್ರಗಳನ್ನು ಪರಿಶೀಲನೆ ನಡೆಸಿದರು.
ಇಗ್ಗಲೂರು ಗ್ರಾಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸುವ ಹಾಗೂ ಸಕಾಲದಲ್ಲಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಉದ್ದೇಶದಿಂದಸರ್ಕಾರ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಕೇಂದ್ರಗಳು ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿವೆ. ಈ ಕೇಂದ್ರದ ನಿರ್ವಹಣೆ ಹೊತ್ತವರು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಯೋಜನೆಯ ಉದ್ದೇಶವನ್ನು ಸಫಲಗೊಳಿಸಲು ಶ್ರಮಿಸಬೇಕು ಎಂದು ಕರೆನೀಡಿದರು.
ಬೆಂಗಳೂರು ಒನ್ ಮಾದರಿಯಲ್ಲಿ ಈ ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಕೇಂದ್ರದ ಮೂಲಕ ಸುವಾರು 750ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ವಿವಿಧ ಇಲಾಖೆಗಳಿಗೆ ಅಲೆದಾಡುವ ಬದಲು ಗ್ರಾಪಂನಲ್ಲೇ ಸಾರ್ವಜನಿಕರು ಅರ್ಜಿ ಸಲ್ಲಿಸಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಜತೆಗೆ, ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕೇಂದ್ರಗಳು ಪ್ರಮುಖ ಪಾತ್ರವಹಿಸಲಿವೆ ಎಂದು ಅಭಿಪ್ರಾಯಪಟ್ಟರು.
ಈ ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಗ್ರಾಮ ಒನ್ ಕೇಂದ್ರಗಳನ್ನು ವಿಸ್ತರಿಸುವ ಗುರಿಹೊಂದಿದೆ. ಆಡಳಿತ ಯಂತ್ರವನ್ನು ಮತ್ತಷ್ಟು ಸನಿಹಕ್ಕೆ ತೆಗೆದು ಕೊಂಡು ಹೋಗುವಲ್ಲಿ ಈ ಕೇಂದ್ರಗಳು ಸಹಕಾರಿಯಾಗಲಿವೆ. ಜನರು ತಮ್ಮ ಕೆಲಸಕಾರ್ಯಗಳಿಗಾಗಿ ವಿನಾಕಾರಣ ಅಲೆದಾಡುವುದು ತಪ್ಪಲಿದೆ ಎಂದರು.
ಕೇಂದ್ರದ ಪ್ರತಿನಿಧಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಬೇಕು ಎಂದು ತಾಕೀತು ವಾಡಿದರು. ತಹಸೀಲ್ದಾರ್ ನಾಗೇಶ್, ಗ್ರೇಡ್ 2 ತಹಸೀಲ್ದಾರ್ ಲಕ್ಷ್ಮೀದೇವಮ್ಮ, ಉಪತಹಸೀಲ್ದಾರ್ ಹರೀಶ್‌ಕುವಾರ್, ಗ್ರಾಮಒನ್ ಸಂಯೋಜಕ ಆನಂದ್, ವಿಎ ಭರತ್ ಇನ್ನೂ ಮುಂತಾದವರು ಇದ್ದರು.