ಕಿಕ್ಕೇರಿ: ಹೋಬಳಿಯ ಆನೆಗೊಳ ಚೆಕ್‌ಪೋಸ್ಟ್ ಮೂಲಕ ಹೊರಜಿಲ್ಲೆಗಳಿಂದ ವಾಹನಗಳು ಪ್ರವೇಶಿಸಲಿದ್ದು, ತಪಾಸಣೆ ಜಾಗರೂಕವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಹೋಬಳಿಯ ಗಡಿಭಾಗವಾದ ಆನೆಗೊಳದಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಮತದಾನ ದಿನ ಹತ್ತಿರವಾಗುತ್ತಿದ್ದು, ಕಾರ್ಯಾಚರಣೆ ಮತ್ತಷ್ಟು ಚುರುಕಾಗಬೇಕು. ಮುಂಬೈ ಮತ್ತಿತರ ಕಡೆಯಿಂದ ಅಧಿಕವಾಗಿ ವಾಹನಗಳು ಈ ಮಾರ್ಗವಾಗಿ ಸಂಚರಿಸಲಿದ್ದು, ಅಧಿಕೃತ ದಾಖಲೆ ಇಲ್ಲದ ವಸ್ತುಗಳು ಕಂಡು ಬಂದರೆ ವಶಕ್ಕೆ ಪಡೆದು ಕ್ರಮ ಜರುಗಿಸಬೇಕು. ಇದಕ್ಕೆ ಯಾವುದೇ ಹಿಂಜರಿಕೆ ಬೇಡ ಎಂದು ಹೇಳಿದರು.
ಎಸ್‌ಪಿ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಸಹಾಯಕ ಚುನಾವಣಾಧಿಕಾರಿ ಚಂದ್ರಪ್ಪ, ಇನ್‌ಸ್ಪೆಕ್ಟರ್ ರೇವತಿ, ಪಿಡಿಒ ರವಿಕುಮಾರ್, ಗ್ರಾಮ ಆಡಳಿತಾಧಿಕಾರಿ ಸೋಮಾಚಾರ್ ಮತ್ತಿತರರಿದ್ದರು.