ಮಂಡ್ಯ: ಸಾರ್ವಜನಿಕರು ಸರ್ಕಾರಿ ಕಚೇರಿಯಲ್ಲಿ ತಮ್ಮ ಕೆಲಸವಾಗಬೇಕಾದರೆ ತಹಸೀಲ್ದಾರ್ ಅವರನ್ನೇ ಮುಖಾಮುಖಿ ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.
ನಗರದ ಮಂಡ್ಯ ಉಪವಿಭಾಗಾಧಿಕಾರಿ ಹಾಗೂ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕಂದಾಯ ಇಲಾಖೆ ಹಾಗೂ ಎಸಿ ಕಚೇರಿಗೆ ಭೇಟಿ ಕೊಡುವ ಯಾವುದೇ ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು. ಬದಲಿಗೆ ಯಾವುದೇ ಸಮಸ್ಯೆಗಳಿದ್ದರೂ ತಾಲೂಕು ದಂಡಾಧಿಕಾರಿಯನ್ನೇ ಭೇಟಿ ಮಾಡಿ ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗಬಾರದು. ಕಾನೂನು ವ್ಯಾಪ್ತಿಯಲ್ಲಿ ಯಾವುದನ್ನು ಅತಿ ತುರ್ತಾಗಿ ಮಾಡಬೇಕು, ಅದನ್ನು ಖಂಡಿತವಾಗಿಯೂ ಮಾಡಲಾಗುವುದು. ತಹಸೀಲ್ದಾರ್ ಹೊಸದಾಗಿ ಬಂದಿರುವುದರಿಂದ ಇಲ್ಲಿಯ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ಅವರಿಗೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಪ್ರಾರಂಭದಲ್ಲಿ ಅವರಿಗೂ ಸ್ವಲ್ಪ ತೊಡಕುಗಳು ಉಂಟಾಗಿರುತ್ತವೆ. ಆದರೂ ಸಹ ಕಾನೂನು ವ್ಯಾಪ್ತಿಗೆ ಒಳಪಡುವ ಹಾಗೂ ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ತುರ್ತಾಗಿ ಮಾಡಲು ಆದೇಶ ಮಾಡಿದ್ದೇನೆ ಎಂದರು.
ಆರ್‌ಟಿಸಿ ತಿದ್ದುಪಡಿ, ಸರ್ವೇ ಇಲಾಖೆ ಹಾಗೂ ಕೋರ್ಟ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಡತ ಪರಿಶೀಲನೆ ಮಾಡಿದ ಡಿಸಿ, ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ಕರ್ತವ್ಯಲೋಪ ಮಾಡಿರುವುದು ಖಚಿತವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಹಿಂದೆ ಕೈ ಬರವಣಿಗೆ ಆರ್‌ಟಿಸಿ ಹಾಗೂ ಕೆಲವು ದಾಖಲೆಗಳ ಮೇಲೆ ತಿದ್ದುಪಡಿಗಳಾಗಿದ್ದರೆ ಅದರ ಬಗ್ಗೆ ಪರಿಶೀಲನೆ ಮಾಡಬೇಕು. ಜತೆಗೆ ತಹಸೀಲ್ದಾರ್ ಹಾಗೂ ಎಸಿ ಕೋರ್ಟ್‌ನಲ್ಲಿರು ವ್ಯಾಜ್ಯಗಳು ಇತ್ಯರ್ಥ ಆಗಬೇಕು. ಅಂತಹ ಪ್ರಕರಣಗಳು ಯಾವುದಾದರು ಇದ್ದರೆ ನಾನು ತಕ್ಷಣ ಅದನ್ನು ಪರಿಶೀಲನೆ ಮಾಡಿಸುತ್ತೇನೆ. ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನೀಡಲಾಗುವ ಪರಿಹಾರವನ್ನು ಪಾವತಿಸಲು ಸರಿಯಾದ ಮಾಹಿತಿಯನ್ನು ನಿಗದಿತ ಸಮಯದೊಳಗೆ ಸಂಬಂಧಿಸಿದ ಅಧಿಕಾರಿಗಳು/ಸಿಬ್ಬಂದಿ ಕ್ರಮ ವಹಿಸಬೇಕು. ಮನೆ ಹಾಗೂ ಬೆಳೆಹಾನಿ ಕುರಿತಂತೆ ಪರಿಹಾರ ಪಾವತಿಯಾಗದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಇದ್ದರು. ಇದೇ ವೇಳೆ ತಾಲೂಕು ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಕೆಲವೊಂದನ್ನು ಸ್ಥಳದಲ್ಲೇ ಪರಿಹರಿಸಿದರು.