ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರಸ್ತೆ, ರಾಜಕಾಲುವೆ ಸೇರಿ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದು ಕಂಡು ಬಂದಲ್ಲಿ ಕೂಡಲೇ ತೆರವುಗೊಳಿಸಿ ಒತ್ತುವರಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.
ತಾಲೂಕು ಕಚೇರಿಗೆ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಮಂಗಳವಾರ ಭೇಟಿ ನೀಡಿ ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಕುಂದು-ಕೊರತೆ ಆಲಿಸಿ ನಂತರ ಮಾತನಾಡಿ, ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಕಾಲದಲ್ಲಿ ಜಿಲ್ಲೆಯು ಉತ್ತಮ ಸಾಧನೆ ಮಾಡಿದ್ದು, ಜನರಿಗೆ ಸಿಗುವಂತಹ ಸರ್ಕಾರದ ಸೇವೆಗಳನ್ನು ಸಕಾಲದಲ್ಲಿ ತಲುಪಿಸುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರಿಂದ ಬಂದಂತಹ ಅಹವಾಲು ಮತ್ತು ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಚೇರಿಯ ಕೆಲಸ ಮತ್ತಷ್ಟು ಸುಧಾರಿಸಲು ಹಲವು ವರದಿ ಸಿದ್ಧಪಡಿಸಲಾಗುತ್ತಿದ್ದು, ಅದರ ಆಧಾರದ ಮೇಲೆ ಮತ್ತಷ್ಟು ಸಲಹೆ ಸೂಚನೆಗಳನ್ನು ನೀಡಲಾಗುವುದು. ಕಚೇರಿಯ ಭೂಮಿ ಶಾಖೆ, ಸಿಬ್ಬಂದಿ ಕೊಠಡಿ, ಅಭಿಲೇಖಾಲಯ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಚುನಾವಣೆ ಶಾಖೆ, ನ್ಯಾಯಾಲಯ ಸಭಾಂಗಣ, ತಹಸೀಲ್ದಾರ್ ಗ್ರೇಡ್ 2, ಉಪವಿಭಾಗಾಧಿಕಾರಿ ಕಚೇರಿ ಸೇರಿ ಎಲ್ಲ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲ ಶಾಖೆಗಳು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ತಹಸೀಲ್ದಾರ್ ಗಣಪತಿಶಾಸ್ತ್ರಿ ಸೇರಿ ತಾಲೂಕು ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.