ಜಿಲ್ಲೆ

ಪ್ರವಾಹ ಪೀಡಿತ ಗ್ರಾಮಗಳಿಗೆ ಡಿಸಿ ಭೇಟಿ

ಲಲಾಟಾಕ್ಷ ಎಸ್

ಕೊಳ್ಳೇಗಾಲ: ಕಾವೇರಿ ಪ್ರವಾಹಕ್ಕೆ ಸಿಲುಕಿರುವ ಗ್ರಾಮಗಳಿಗೆ ಗುರುವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ತೆಪ್ಪದ ಸಹಾಯದಿಂದ ದಾಸನಪುರ, ಹಳೇ ಅಣಗಳ್ಳಿ ಗ್ರಾಮಕ್ಕೆ ತೆರಳಿ ಅಪಾಯ ಲೆಕ್ಕಿಸದೆ ಕೆಲವು ಮನೆಯಲ್ಲಿ ಉಳಿದುಕೊಂಡಿದ್ದ ಜನರಿಗೆ ತಿಳಿ ಹೇಳಿದರು. ನಂತರ ಅವರನ್ನು ಗ್ರಾಮದಿಂದ ಹೊರಗೆ ಕರೆತಂದು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. ಬಳಿಕ ಮುಳ್ಳೂರು ಗ್ರಾಮದಲ್ಲಿ ಪ್ರವಾಹಕ್ಕೆ ಮುಳುಗಡೆಯಾಗಿರುವ ಗ್ರಾಪಂ ಕಾರ್ಯಾಲಯ, ಮನೆಗಳನ್ನು ವೀಕ್ಷಿಸಿದರು. ಹಳೇ ಹಂಪಾಪುರದಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು. ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್, ತಹಸೀಲ್ದಾರ್ ಮಂಜುಳಾ, ಇಒ ಶ್ರೀನಿವಾಸ್ ಇದ್ದರು.


ಕಾಳಜಿ ಕೇಂದ್ರಕ್ಕೆ ಡಿಸಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿದರು. ಕೆಲಕಾಲ ಮಕ್ಕಳೊಂದಿಗೆ ಕಾಲ ಕಳೆದರು. ಅಗತ್ಯವಿದ್ದರೆ ಮಕ್ಕಳಿಗೆ ಆಟದ ಪರಿಕರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಂತ್ರಸ್ತರಿಗೆ ಊಟ ವಿತರಣೆ;

ಮಧಾಹ್ನ ಡಿಸಿ ಹಾಗೂ ಎಸ್ಪಿ ಕಾಳಜಿ ಕೇಂದ್ರದ ಭೋಜನ ಕೊಠಡಿಗೆ ತೆರಳಿ ಸಂತ್ರಸ್ತರಿಗೆ ತಾವೇ ಖುದ್ದು ಊಟ ಬಡಿಸಿದರು. ಈ ವೇಳೆ ಊಟ, ವಸತಿ ವ್ಯವಸ್ಥೆ ಬಗ್ಗೆ ಮಕ್ಕಳು, ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಎಸ್‌ಡಿಎ ಶಾಲೆ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್‌ನಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ತೆರಳಿ ಮೂಲಸೌಕರ್ಯ ಪರಿಶೀಲಿಸಿದರು. ನೆರೆ ಹಿನ್ನೆಲೆಯಲ್ಲಿ 25 ಕಡೆ ಕಾಳಜಿ ಕೇಂದ್ರ ಗುರುತಿಸಲಾಗಿದೆ. ಸದ್ಯ ಪಟ್ಟಣದ 5 ಕಡೆಗಳಲ್ಲಿ ಹಾಗೂ ಮುಳ್ಳೂರಿನ ಶಾಲೆಯಲ್ಲಿ ಕೇಂದ್ರ ತೆರೆದು ಸಂತ್ರಸ್ತರಿಗೆ ಜಿಲ್ಲಾಡಳಿತ ನೆರವು ನೀಡಿದೆ. ಸುಮಾರು 550ಕ್ಕೂ ಹೆಚ್ಚು ಜನರು ಆಶ್ರಯ ಪಡೆದುಕೊಂಡಿದ್ದಾರೆ.

ಬೇಸರ ವ್ಯಕ್ತಪಡಿಸಿದ ಡಿಸಿ

ಪ್ರವಾಹವಿದ್ದರೂ ಹಳೇ ಅಣಗಳ್ಳಿ ಹಾಗೂ ದಾಸನಪುರ ಗ್ರಾಮದ ಮನೆಗಳಲ್ಲಿ ಕೆಲವರು ಉಳಿದುಕೊಂಡಿದ್ದನ್ನು ನೋಡಿ ಜಿಲ್ಲಾಧಿಕಾರಿ ಬೇಸರ ವ್ಯಕ್ತಪಡಿಸಿದರು. ವೃದ್ಧರನ್ನು ಮನೆಯಲ್ಲೇ ಬಿಟ್ಟು ಬಂದಿರುವುದು ಸರಿಯಲ್ಲ. ಜಿಲ್ಲಾಡಳಿತ ಎಲ್ಲ ಸೌಕರ್ಯವನ್ನು ಕಾಳಜಿ ಕೇಂದ್ರದಲ್ಲಿ ನೀಡಿದೆ. ಗ್ರಾಮದೊಳಗೆ ಯಾರೂ ಇರಬಾರದು. ಒಂದು ವೇಳೆ ಇದ್ದರೆ ಅವರ ಮೇಲೆ ಕ್ರಮವಹಿಸಲು ಪೊಲೀಸರಿಗೆ ಸೂಚಿಸಿದರು.

ಶಾಸಕರ ಭೇಟಿ
ಕಾವೇರಿ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ನೀಡಿದ್ದರು. ದಾಸನಪುರ, ಹಳೇ ಅಣಗಳ್ಳಿ ಗ್ರಾಮಗಳಿಗೆ ತೆಪ್ಪದ ಮೂಲಕ ತೆರಳಿ ಪ್ರವಾಹದಿಂದ ಮನೆಗಳು ಮುಳುಗಡೆ ಆಗಿರುವುದನ್ನು ವೀಕ್ಷಿಸಿದರು. ನಂತರ, ಹಳೇ ಹಂಪಾಪುರ ಹಾಗೂ ಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿ, ಪ್ರವಾಹ ತಡೆಗೆ ತಡಗೋಡೆ ನಿರ್ಮಿಸಬೇಕೆಂದು ಬೆಳಗಾವಿ ಅಧಿವೇಶನದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೆ. ಇದಕ್ಕೆ 150 ಕೋಟಿ ರೂ.ಗೂ ಅಧಿಕ ಅನುದಾನ ಅಗತ್ಯವಿದೆ. ಹಂತ ಹಂತವಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಲು ಮನವಿ ಮಾಡುತ್ತೇನೆ ಎಂದರು.