ಚನ್ನರಾಯಪಟ್ಟಣ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಎರಡನೇ ಸುತ್ತು ಅಧಿಕಾರಿಗಳ ಕಾಲ್ನಡಿಗೆ ಜಾಥಾ ಮೂಲಕ ಗಮನ ಸೆಳೆಯಿತು.
ದೇವನಹಳ್ಳಿ ತಾಲೂಕು ನಲ್ಲೂರು ಗ್ರಾಮದಲ್ಲಿ ಶನಿವಾರ ಚಾಲನೆ ದೊರೆತ ಕಾರ್ಯಕ್ರಮದಲ್ಲಿ ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ದಂಡೇ ನೆರೆದಿತ್ತು. ಗ್ರಾಮದ ಬೀದಿಬೀದಿಗಳನ್ನು ಸುತ್ತಿದ ಅಧಿಕಾರಿಗಳು, ಮನೆ ಬಾಗಿಲ ಬಳಿ ಹೋಗಿ ಸಾರ್ವಜನಿಕರ ಅಹವಾಲು ಆಲಿಸಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಇಡೀ ದಿನ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವ ಪ್ರಯತ್ನ ನಡೆಸಿತು. ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿ, ಶಾಸಕರನ್ನು ಆರತಿ ಬೆಳಗಿ ಸ್ವಾಗತ ಕೋರಿದರು. ಕೋಟೆ ಶ್ರೀ ಗಂಗಮ್ಮ ದೇವಿ ದೇಗುಲದಲ್ಲಿ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ, ಸರ್ಕಾರಿ ಆರೋಗ್ಯ ಕೇಂದ್ರದ ಮೂಲಕ ದಲಿತ ಕಾಲನಿ ಸೇರಿ ಗ್ರಾಮದ ಪ್ರತಿ ಬೀದಿಗಳಲ್ಲಿ ಕಾಲ್ನಡಿಗೆ ಮೂಲಕ ತೆರಳಿ ಅಹವಾಲು ಸ್ವೀಕರಿಸಿದರು. ಗ್ರಾಮದ 94 ಸಿಸಿ ಮೂಲಕ ಹಕ್ಕು ಪತ್ರಗಳನ್ನು ಲಾನುಭವಿಗಳಿಗೆ ವಿತರಿಸಲಾಯಿತು.
ಅಲೆದಾಟಕ್ಕೆ ಬ್ರೇಕ್: ಇತ್ತೀಚಿಗೆ ಕರೊನಾ ಸೋಂಕು ಮತ್ತೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಜನದಟ್ಟಣೆಗೆ ಅವಕಾಶ ಮಾಡಿಕೊಡಬಾರದು. ಆದ್ದರಿಂದ ಜನರ ಮನವಿ ಪತ್ರ ಸ್ವೀಕರಿಸಿ ಕಾಲಮಿತಿಯಲ್ಲಿ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಸಣ್ಣ ಸಮಸ್ಯೆಗಳಿಗೂ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವ ಪರಿಸ್ಥಿತಿ ದೂರಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕೆಐಎಡಿಬಿ ಮೂರನೇ ಸಾಲಿನ ಭೂ ಪರಿವರ್ತನೆ ಮುಂದಾಗುವುದು ಬೇಡವೆಂದು ಸರ್ಕಾರಕ್ಕೆ ಮನವರಿಕೆ ಮಾಡುವ ಕೊಡುವ ಪ್ರಯತ್ನ ಮಾಡಲಾಗಿದೆ. ಯಾವುದೇ ಜಮೀನಿನ ನಕಾಷೆಯಲ್ಲಿ ದಾರಿ ಇದ್ದಲ್ಲಿ ತಹಸೀಲ್ದಾರ್ ಅವರು ಸೂಚನೆ ನೀಡಲಿದ್ದು, ಅವರ ಸಮ್ಮುಖದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದರು.
ರೈತರಿಗೆ ಅನುಕೂಲ: ಸಣ್ಣ ಪುಟ್ಟ ರೈತರು ದಶಕಗಳಿಂದ ಸಾಗುವಳಿ ಚೀಟಿಗಾಗಿ ಪರೆದಾಡುವುದನ್ನು ತಪ್ಪಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು. ದೊಡ್ಡಬಳ್ಳಾಪುರ ಉಪವಿಭಾಗಧಿಕಾರಿ ಅರೋಳ್‌ಕುಮಾರ್ ಮಾತನಾಡಿ, ಪಿಂಚಣಿ, ಅಶ್ರಯ ಯೋಜನೆ, ,ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತಿತರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಡುವ ಪ್ರಯತ್ನ ಇದಾಗಿದೆ ಎಂದರು. ಕ್ರೀಡಾ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಕ್ರೀಡಾ ಕಿಟ್ ವಿತರಿಸಲಾಯಿತು, ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್, ಜಿಪಂ ಸಿಇಒ ಎಂ.ಆರ್.ರವಿಕುಮಾರ್, ತಹಸೀಲ್ದಾರ್ ಅನಿಲ್ ಹರೋಲಿಕರ್, ತಾಪಂ ಅಧ್ಯಕ್ಷ ಶಶಿಕಲಾ ಅನಂದ್, ತಾಪಂ ಸದಸ್ಯ ಸೋಮತ್ತನಹಳ್ಳಿ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮೀ, ಉಪಾಧ್ಯಕ್ಷೆ ಮಮತಾ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು ಮತ್ತಿತರಿದ್ದರು.