ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಆಯೋಜಿಸಿದ್ದ ವಿದ್ಯಾಪೋಷಕ್​ ಸನಿವಾಸ ಶಿಬಿರಕ್ಕೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹಾಗೂ ಸಹಾಯಕ ಆಯುಕ್ತೆ ರಶ್ಮಿ ಎಸ್​. ಭೇಟಿ ನೀಡಿದರು. ಭುವನ ಪ್ರಸಾದ್​ ಹೆಗ್ಡೆ, ಎಚ್​.ಎನ್​. ಶೃಂಗೇಶ್ವರ, ಎಸ್​.ಗಣರಾಜ್​ ಭಟ್​, ಪೃಥ್ವಿರಾಜ್​ ಕವತ್ತಾರ್​, ಮುರಲಿ ಕಡೆಕಾರ್​ ಇತರರಿದ್ದರು 
ಜಿಲ್ಲೆ

ಉನ್ನತ ಶಿಕ್ಷಣಕ್ಕೆ ಕನ್ನಡ ಮಾಧ್ಯಮ ತೊಡಕಾಗದು

ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅಭಿಮತ -- ವಿದ್ಯಾಪೋಷಕ್​ ಸನಿವಾಸ ಶಿಬಿರ

ಉಡುಪಿ: ನಾನು ಕನ್ನಡ ಮಾಧ್ಯಮದಲ್ಲಿಯೇ ಓದಿದವಳು. ಮಾಧ್ಯಮ ಯಾವುದೇ ಇರಲಿ, ಸಾಧಿಸುವ ಛಲ ಇದ್ದರೆ ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು. ಉನ್ನತ ಶಿಕ್ಷಣಕ್ಕೆ ಕನ್ನಡ ಮಾಧ್ಯಮ ಎಂದಿಗೂ ತೊಡಕಾಗದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಮತ ವ್ಯಕ್ತಪಡಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್​ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಐದು ದಿನಗಳ ಸನಿವಾಸ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದರು.

ಸಾಧನೆಯ ತುಡಿತ ಇರಲಿ

ಶಿಬಿರದಲ್ಲಿ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿ ಇದ್ದೀರಿ. ರಾಷ್ಟ್ರ ನಿಮಾರ್ಣದಲ್ಲಿ ನಾರಿ ಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಮಗೆಲ್ಲರಿಗೂ ಸಾಧನೆಯ ತುಡಿತ ಇರಲಿ ಎಂದು ಪ್ರೇರಣಾತ್ಮಕವಾಗಿ ಹಾರೈಸಿದರು.

ಬಹುದೊಡ್ಡ ಅಭಿಯಾನ

ಸಹಾಯಕ ಆಯುಕ್ತೆ ರಶ್ಮಿ ಎಸ್​. ಮಾತನಾಡಿ, ಉಡುಪಿಯ ಯಕ್ಷಗಾನ ಕಲಾರಂಗವು ಸಮಾಜ ಮತ್ತು ಸಂಸ್ಕೃತಿಗಾಗಿ ಬಹುದೊಡ್ಡ ಅಭಿಯಾನವನ್ನೇ ನಡೆಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳಾ ಅಧಿಕಾರಿಗಳಿಬ್ಬರನ್ನೂ ಸಂಸ್ಥೆಯ ಉಪಾಧ್ಯಕ್ಷ ಎಸ್​.ವಿ. ಭಟ್​, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್​ ಹಾಗೂ ಇತರರು ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.

ಸಂಸ್ಥೆಯ ಕಾರ್ಯಕರ್ತರಾದ ಭುವನಪ್ರಸಾದ್​ ಹೆಗ್ಡೆ, ಎಚ್​.ಎನ್​. ಶೃಂಗೇಶ್ವರ, ಎಸ್​.ಗಣರಾಜ್​ ಭಟ್​, ಪೃಥ್ವಿರಾಜ್​ ಕವತ್ತಾರ್​, ದಿನೇಶ ಪೂಜಾರಿ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ ಭಟ್​, ನಟರಾಜ ಉಪಾಧ್ಯಾಯ, ಮಂಜುನಾಥ, ವಿಶ್ವನಾಥ ಹಾಗೂ ಶಿಬಿರದ ನಿರ್ದೇಶಕ ಪ್ರವೀಣ್​ ಗುಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಸಂಸ್ಥೆಯ ಕಾರ್ಯ ಚಟುವಟಿಕೆ ತಿಳಿಸಿ, ಕಾರ್ಯಕ್ರಮ ನಿರೂಪಿಸಿದರು.