ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವೈವಿಧ್ಯತೆ ಸಾರುವ 'ಉಡುಪಿ ಆಂಥೆಮ್​' ವಿಡಿಯೋ ಚಿತ್ರಣವನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಬಿಡುಗಡೆ ಮಾಡಿದರು. ಮಮತಾದೇವಿ ಜಿ.ಎಸ್​., ಕುಮಾರ್​ ಸಿ.ಯು., ಮಂಜುನಾಥ್​ ಇತರರಿದ್ದರು. 
ಜಿಲ್ಲೆ

ಜಿಲ್ಲೆಯ ಪ್ರವಾಸಿ ತಾಣಗಳು ಜನಾಕರ್ಷಣೆಗೊಳ್ಳಲಿ

ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ | 'ಉಡುಪಿ ಆಂಥೆಮ್​' ವಿಡಿಯೋ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿರುವ ನೈಸರ್ಗಿಕ ಸೌಂದರ್ಯ ತಾಣ, ಕಡಲತೀರ, ಧಾರ್ಮಿಕ ಕೇಂದ್ರ, ಸ್ಥಳೀಯ ಸಂಸ್ಕೃತಿ-ಸಂಪ್ರದಾಯ, ಜಾನಪದ ಕಲೆ, ಧಾರ್ಮಿಕ ಉತ್ಸವಗಳನ್ನೂ ಸೇರಿಸಿ ದೇಶ-ವಿದೇಶದ ಜನರಿಗೆ ಅವುಗಳನ್ನು ಪ್ರಚಾರಪಡಿಸಬೇಕು. ಇಲ್ಲಿನ ಸುಂದರ ತಾಣಗಳೆಲ್ಲವನ್ನೂ ಜನಾಕರ್ಷಕವಾಗಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚಿಸಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಉಡುಪಿ ಹಾಗೂ ಜಸ್ಟ್​ ರೋಲ್​ ಫಿಲ್ಮಸ್​ನ ಆಶ್ರಯದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳನ್ನೊಳಗೊಂಡ, ಸುಮಧುರ ಹಾಡಿನೊಂದಿಗೆ ರಚಿಸಿದ ದ್ವಂದ್ವ ಎಂಬ ಉಡುಪಿ ಆಂಥೆಮ್​ವಿಡಿಯೋ ಚಿತ್ರಣವನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಹೊಸ 32 ಪ್ರವಾಸಿ ತಾಣ

ಜಿಲ್ಲೆಯಲ್ಲಿರುವ ಪ್ರಮುಖ 48 ಪ್ರವಾಸಿ ತಾಣಗಳ ಜತೆಗೆ ಹೊಸದಾಗಿ 32 ಪ್ರವಾಸಿ ತಾಣ ಗುರುತಿಸಲಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದೆ. ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು ಆಧುನಿಕ ತಂತ್ರಜ್ಞಾನ ಬಳಕೆಯೊಂದಿಗೆ ಹೆಚ್ಚು ಜನರನ್ನು ತಲುಪಿಸುವ ಕೆಲಸವಾಗಬೇಕಿದೆ ಎಂದರು.

ಹೆಚ್ಚು ಪ್ರಚಾರಪಡಿಸಿ

ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಜಸ್ಟ್​ ರೋಲ್​ ಫಿಲ್ಮಸ್​ ಅವರು ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯಿಸಲು ರೂಪಿಸಿರುವ ಉಡುಪಿ ಆಂಥೆಮ್​ ವಿಡಿಯೋ ಚಿತ್ರಣವು ಉತ್ತಮವಾಗಿ ಮೂಡಿಬಂದಿದೆ. ಅದನ್ನು ಜಿಲ್ಲೆಯ ವೆಬ್​ಸೈಟ್​, ಇನ್​ಸ್ಟ್ರಾಗ್ರಾಮ್​, ಟ್ವಿಟರ್​ ಹಾಗೂ ಪ್ರತಿಷ್ಠಿತ ಬ್ಲಾಗ್​ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರಪಡಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್​ ಸಿ.ಯು., ವಾರ್ತಾಧಿಕಾರಿ ಮಂಜುನಾಥ್​, ಜಸ್ಟ್​ ರೋಲ್​ ಫಿಲ್ಮಸ್​ ಯೂಟ್ಯೂಬ್​ ಚಾನಲ್​ನ ನಿರ್ದೇಶಕ, ನಿಮಾರ್ಪಕರು ಹಾಗೂ ಸಾಹಿತ್ಯ ಸಂಯೋಜಕರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ವೈವಿಧ್ಯತೆ ಸಾರುವ ವಿಡಿಯೋ

ಐದು ನಿಮಿಷದ ವಿಡಿಯೋ ಚಿತ್ರಣದಲ್ಲಿ 'ಅಂದದ ಚೆಂದದ ನೂತನ ಚೇತನ ಸುಂದರ ಸೊಗಸಿನ ಊರು, ರಮ್ಯ ನಿಸರ್ಗದ ತೋರಣ ಹೊತ್ತ ನಯನ ಮನೋಹರ ಬೀಡು, ಅರಬ್ಬಿ ಸಮುದ್ರದ ಅಲೆಗಳು ಬಾಗುವ ಕಡಲ ಕಿನಾರೆಯ ನಾಡು, ಪ್ರೀತಿ-ಅಕ್ಕರೆ ತುಂಬಿದ ನಿತ್ಯ ರಮಣೀಯ
ಗೂಡು, ಉಡುಪಿ…' ಎಂಬ ಹಾಡಿನಲ್ಲಿ ದೇವಾಲಯಗಳು, ಭಾಷೆ, ಕಲೆ, ಸಂಸ್ಕೃತಿ, ಸಂಪ್ರದಾಯ, ಹಬ್ಬ, ಜಾತ್ರೆಗಳ ವೈಭವ, ಯಕ್ಷಗಾನ, ಭೂತ, ನೇಮ, ಕೋಲ ಆಚರಣೆ, ಕಂಬಳದ ವೈಭವ ಅದ್ಭುತವಾಗಿ ಮೂಡಿಬಂದಿದೆ.