ಜಿಲ್ಲೆ

ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಸೊಳ್ಳೆಗಳ ನಿಮೂರ್ಲನೆ ಅಗತ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಜನಸಾಮಾನ್ಯರು ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಸೊಳ್ಳೆಗಳ ನಿಮೂರ್ಲನೆಯಿಂದ ಮಾತ್ರ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಪ್ರತಿ ಶುಕ್ರವಾರ ಲಾರ್ವಾ ನಿಮೂರ್ಲನಾ ದಿನ ಅಂಗವಾಗಿ ಕೊಡಂಕೂರು ವಾರ್ಡಿನ ಪ್ರಮೋದ್​ ಬಡಾವಣೆಯಲ್ಲಿ ಮನೆಮನೆಗೆ ತೆರಳಿ ಡೆಂಗ್ಯೂ ಜಾಗೃತಿ ಕರಪತ್ರ ವಿತರಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲೆಯ ಜನರು ಡೆಂಗ್ಯೂ ನಿಯಂತ್ರಣದ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇದರ ನಿಯಂತ್ರಣದ ಬಗ್ಗೆ ತಿಳುವಳಿಕೆ ಹೊಂದುವುದರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಡೆಂಗ್ಯೂ ನಿಯಂತ್ರಿಸಿ, ನಿಮೂರ್ಲನೆ ಮಾಡಲು ಮುಂದಾಗಬೇಕು ಎಂದರು. ಡೆಂಗ್ಯೂ ಜ್ವರ ವೈರಸ್​ನಿಂದ ಉಂಟಾಗುವ ಕಾಯಿಲೆಯಾಗಿದ್ದು, ಸೋಂಕು ಹೊಂದಿದ ಈಡಿಸ್​ ಈಜಿಪ್ಟಿ ಮತ್ತು ಈಡಿಸ್​ ಅಲ್ಬೋಪಿಕ್ಟಸ್​ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ಸೊಳ್ಳೆ ಸ್ವಚ್ಛ ನೀರಿನಲ್ಲಿ ಸಂತಾನ ಅಭಿವೃದ್ಧಿ ಮಾಡುವ ಜೊತೆಗೆ ಹಗಲು ಹೊತ್ತಿನಲ್ಲಿ ಮನುಷ್ಯರಿಗೆ ಕಚ್ಚುತ್ತದೆ. ಇದರ ಹತೋಟಿಗೆ ಮುಖ್ಯವಾಗಿ ಮನೆಯ ಸುತ್ತಮುತ್ತ, ಟೆರಸ್​ ಮೇಲೆ, ಸಿಮೆಂಟ್​ ತೊಟ್ಟಿಗಳಲ್ಲಿ, ಡ್ರಂ, ಬ್ಯಾರಲ್​, ಮಣ್ಣಿನ ಮಡಕೆಗಳು, ಅನುಪಯೋಗ ವಸ್ತುಗಳಲ್ಲಿ ಮಳೆಯ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ತೊಟ್ಟಿ, ಡ್ರಂ, ಬ್ಯಾರಲ್​, ಏರ್​ಕೂಲರ್​ಗಳಲ್ಲಿ ಸಾಧ್ಯವಾದಷ್ಟು ವಾರದಲ್ಲಿ ಎರಡು ಮೂರು ಬಾರಿ ಖಾಲಿ ಮಾಡಿ, ಒಣಗಿಸಿ, ಭರ್ತಿ ಮಾಡಬೇಕು ಎಂದರು.
ಮನೆ ಮನೆಗೆ ಭೇಟಿ
ಪ್ರಮೋದ್​ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಡೆಂಗ್ಯೂ ನಿಯಂತ್ರಣ ಮಾಹಿತಿಯ ಕರಪತ್ರಗಳನ್ನು ವಿತರಿಸುವ ಜೊತೆಗೆ ಸ್ಥಳಿಯ ವಾಸಿಗಳೊಂದಿಗೆ ಮನೆಯಲ್ಲಿನ ಲಾರ್ವಾ ನಾಶದ ಬಗ್ಗೆ ಹಾಗೂ ಈಡಿಸ್​ ಸೊಳ್ಳೆಗಳ ಉತ್ಪತ್ತಿ ಕುರಿತು ಜಿಲ್ಲಾಧಿಕಾರಿಗಳು ಸ್ವತ@ ಮಾಹಿತಿ ನೀಡುವುದರೊಂದಿಗೆ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಕಾಪಾಡುವುದು, ನೀರಿನ ಸಂಗ್ರಹ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಮನೆ ಮುಂದೆ ಶೇಖರಿಸಿದ ನೀರಿಗೆ ಬ್ಯಾಟರಿ ಹಾಕಿ ಲಾರ್ವಾ ಇರುವ ಬಗ್ಗೆ ಪರಿಶೀಲನೆ ನಡೆಸಿ, ಕೇರಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಮಳೆಯಿಂದ ನಿಂತ ನೀರಿಗೆ ಆರೋಗ್ಯ ಹಾಗೂ ನಗರಸಭಾ ಸಿಬ್ಬಂದಿ ರಾಸಾಯನಿಕ ಸಿಂಪರಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ ಗಡಾದ್​, ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್​ ಭಟ್​, ತಾಲೂಕು ವೈದ್ಯಾಧಿಕಾರಿ ಡಾ. ವಾಸುದೇವ ಮತ್ತಿತರರು ಉಪಸ್ಥಿತರಿದ್ದರು.