ಕೋಲಾರ/ಮಾಲೂರು: ಜಿಲ್ಲೆಯ ಮಾಲೂರು ತಾಲೂಕು ಎಡಿಎಲ್ಆರ್, ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಗುರುವಾರ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು. ಭೇಟಿ ಸಮಯದಲ್ಲಿ ಕಚೇರಿಯಲ್ಲಿನ ಟೇಬಲ್ಗಳ ಮೇಲೆ ಕಡತಗಳು ಇದ್ದದನ್ನು ಕಂಡು ಯಾಕೆ ಇಷ್ಟೊಂದು ಕಡತಗಳನ್ನು ವಿಲೇವಾರಿ ಮಾಡದೆ ಇಟ್ಟುಕೊಂಡಿದೀರಿ. ಏನು ಸಮಸ್ಯೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಕಚೇರಿಯ ಸಿಬ್ಬಂದಿ ಈ ಟೇಬಲ್ನಲ್ಲಿ ಕುಳಿತುಕೊಳ್ಳುವ ಸಿಬ್ಬಂದಿ ರಜೆ ಇದ್ದಾರೆ, ಆದ್ದರಿಂದ ಕಡತಗಳು ಬಾಕಿ ಉಳಿದುಕೊಂಡಿವೆ ಎಂದು ಉತ್ತರಿಸಿದರು. ಇದಕ್ಕೆ ಗರಂ ಆದ ಡಿಸಿ, ನೆಪ ಹೇಳುವುದು ಸುಲಭ, ಜನ ಅರ್ಜಿ ಸಲ್ಲಿಸಿದರೆ ಒಂದು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಅಧಿಕಾರಿಗಳು ಏನು ಮಾಡ್ತೀದಿರಾ ಎಂದು ತರಾಟೆಗೆ ತೆಗೆದುಕೊಂಡರು.
ಜಮೀನು ಸರ್ವೇ ಮಾಡಿಕೊಡುವಂತೆ ಅರ್ಜಿದಾರ ಅರ್ಜಿ ಸಲ್ಲಿಸಿದರೆ, ಸರ್ವೇ ಮಾಡಿಕೊಡಲು ಸರ್ಕಾರಕ್ಕೆ ಶುಲ್ಕ ಪಾವತಿ ಮಾಡುತ್ತಾನೆ. ಕೆಲಸ ವಿಳಂಬವಾದರೆ ಕಚೇರಿಗೆ ಅಲೆಅಲೆದು ಆಕ್ರೋಶಕೊಂಡು ಇಲಾಖೆಯನ್ನು ದೂಷಣೆ ಮಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳಿಗೆ ಗಂಭೀರತೆಯಿರಬೇಕು. ಲೈಸನ್ಸ್ ಸರ್ವೇಯರ್ಗಳು ಎಲ್ಲಿಗೆ ಹೋಗುತ್ತಾರೆ, ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳ ಬಗ್ಗೆ ಮಾಹಿತಿ ಇಲ್ಲ ಅಂದರೆ ಏನು ಅರ್ಥ, ಹೊರಗೆ ಹೋಗಿ ಸರ್ವೇ ಕೆಲಸ ಮಾಡುತ್ತಿದ್ದರಾ, ನೋಟೀಸ್ ನೀಡುತ್ತಿದ್ದಾರಾ ಎಂದು ಯಾರು ಗಮನಿಸಬೇಕು. ತಾಲೂಕು ಸರ್ವೇಯರ್, ಸೂಪರ್ವೇಸರ್ ಏನು ಕೆಲಸ ಮಾಡುತ್ತೀರ ಎಂದು ಗರಂ ಆದರು. ಆನ್ ಲೈನ್ನಲ್ಲಿ ಅರ್ಜಿ ದಾಖಲಾಗಿ ಸರ್ವೇಗೆ ಅರ್ಲಟ್ ಆಗಿ ಬರುತ್ತದೆ, ಅವರು ಸಂಬಂಧ ಪಟ್ಟ ಜಮೀನನ್ನು ಸರ್ವೇ ಮಾಡಿ ಅರ್ಜಿ ವಿಲೇವಾರಿ ಮಾಡುತ್ತಾರೆಯೇ, ಇದು ಗೊತ್ತಾಗುವುದು ಹೇಗೆ. ಅವರಿಗೆ ಹಣ ಬರೊದು ಬರುತ್ತದೆ. ಅಧಿಕಾರಿಗಳು ಈ ಬಗ್ಗೆ ಏನು ಪರಿಶೀಲನೆ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು.
ಎಲ್ಲಾ ತಾಲೂಕು ಕಚೇರಿಗಳಲ್ಲಿ ಸಮಸ್ಯೆಗಳು ಇವೆ, ಒಂದು ತಾಸಿನಲ್ಲಿ ಆಗುವ ಕೆಲಸವನ್ನು ಹಾಗೆ ಬಾಕಿ ಉಳಿಸಿಕೊಂಡರೆ ದಿನಗಳುಗಟ್ಟಲೇ ಬಾಕಿ ಉಳಿದುಕೊಳ್ಳುತ್ತವೆ ಎಂದು ತಿಳಿಸಿದರು. ಕಡತವೊಂದನ್ನು ಪರಿಶೀಲಿಸಿದಾಗ ಕಳೆದ ತಿಂಗಳು ರೈತ ಅರ್ಜಿಯನ್ನು ಸಲ್ಲಿಸಿದ್ದು, ಇದುವರೆಗೂ ವಿಲೇವಾರಿ ಮಾಡದೆ ಹಾಗೆ ಉಳಿಸಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ರೂಪಾ, ಶಿರಸ್ತೇದಾರ್ಗಳಾದ ಶ್ರೀಮತಿ, ಧಮೇಂರ್ದ್ರ ಇದ್ದರು.
ರೈತರಿಗೆ ಮನವರಿಕೆ ಮಾಡಿಸಿ
ಈ ಭಾಗದಲ್ಲಿ ಅತಿ ಹೆಚ್ಚು ಜಮೀನು ಕೆಐಡಿಬಿಗೆ ಒಳಪಡುತ್ತಿರುವುದರಿಂದ ಹೆಚ್ಚಾಗಿ ಹದ್ದುಬಸ್ತ್ಗಾಗಿ ರೈತರು ಅರ್ಜಿ ಸಲ್ಲಿಸುತ್ತಾರೆ ಎಂದು ಎಡಿಎಲ್ಆರ್ ಕೃಷ್ಣ ಹೇಳಿದರು. ಜಮೀನು ನೋಟಿಫಿಕೇಷನ್ ಆದ ನಂತರ ಜಮೀನಿನಲ್ಲಿ ಹೊಸದಾಗಿ ಗಿಡಮರಗಳನ್ನು ನಾಟಿ ಮಾಡಿ, ಪರಿಹಾರ ಕೊಡುವಂತೆ ಒತ್ತಾಯ ಮಾಡುತ್ತಾರೆ. 2022ರ ಸುತ್ತೋಲೆ ಪ್ರಕಾರ ಹೊಸದಾಗಿ ನಾಟಿ ಮಾಡಿದರೆ ಪರಿಹಾರ ಕೊಡಲು ಅವಕಾಶವಿಲ್ಲ. ಆದ್ದರಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಡಾ.ಎಂ.ಆರ್.ರವಿ, ಜಮೀನು ನೋಟಿಫಿಕೇಷನ್ ಆಗಿ, ಜಮೀನನಲ್ಲಿ ಹೊಸದಾಗಿ ಗಿಡಗಳನ್ನು ನಾಟಿ ಮಾಡಿದರೆ ಪರಿಹಾರ ಸಿಗುವುದಿಲ್ಲ ಎಂದು ರೈತರಿಗೆ ಮನವರಿಕೆ ಮಾಡಿಕೊಡಿ. ಕಚೇರಿಗೆ ಸಮಯಕ್ಕೆ ಬಂದು ಜನಕ್ಕೆ ಲಭ್ಯವಾಗಬೇಕು. ನಿಮ್ಮ ತಲೆಯಲ್ಲಿ ಇರುವ ಗೊಂದಲ ಬಿಟ್ಟು ಕೆಲಸ ಮಾಡಿ, ತೋಟಗಾರಿಕೆ ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ಮಾಡಿ ನಾಟಿ ಮಾಡಲಾಗಿರುವ ಗಿಡ, ಮರದ ವಯಸ್ಸು ಸಮೇತ ವರದಿ ನೀಡುತ್ತಾರೆ. ಅದನ್ನು ಕೆಐಡಿಬಿಗೆ ಸಲ್ಲಿಸಿ ಎಂದು ಸೂಚಿಸಿದರು.
ಲೈಸನ್ಸ್ ಸರ್ವೇಯರ್ಗಳನ್ನ ಬಳಸಿ
ಮೊದಲು ಸರ್ಕಾರಿ ರಸ್ತೆ, ಸ್ಮಶಾನ, ಕೆರೆ, ಸರ್ಕಾರಿ ಜಾಗ ಸರ್ವೇ ಮಾಡಿ ಗಡಿ ಗುರುತಿಸಬೇಕು, ಒತ್ತುವರಿ ಆಗಿರುವ ಬಗ್ಗೆ ಸಂಬಂಧ ಅಧಿಕಾರಿಗಳ ಗಮನಕ್ಕೆ ತನ್ನಿ, ಪೊಲೀಸ್, ತಹಸೀಲ್ದಾರ್ ನೇತೃತ್ವದಲ್ಲಿ ತೆರವು ಆಗಿ ಆಸ್ತಿ ಬಂದೋಬಸ್ತ್ ಮಾಡಿಕೊಳ್ಳುತ್ತಾರೆ ಎಂದು ಡಿಸಿ ಹೇಳಿದರು. ತಾಲೂಕಿನಲ್ಲಿ 447 ಕೆರೆಗಳ ಪೈಕಿ 109 ಕರೆ ಸರ್ವೇ ಆಗಿದ್ದು, ಇದೀಗ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಉಳಿದ ಕೆರೆಗಳ ಸರ್ವೇಗೆ ಹೋಗಿದ್ದಾರೆ ಎಂದು ಎಡಿಎಲ್ಆರ್ ಕೃಷ್ಣ ಹೇಳಿದರು. ಕೆರೆಗಳ ಸರ್ವೇಗೂ ಲೈಸನ್ಸ್ ಸರ್ವೇಯರ್ಗಳನ್ನು ಸಹ ಬಳಕೆ ಮಾಡಿಕೊಳ್ಳಬೇಕು. ಅವರಿಗೆ ಪಾವತಿ ಮಾಡಬೇಕಾಗಿರುವ ಹಣ ಪಾವತಿಯಾಗುತ್ತದೆ. ನೀವು ಸರ್ವೇ ಮುಗಿಸಿದರೆ ಒತ್ತುವರಿ ತೆರವು ಕೆಲಸ ಕಂದಾಯ ಅಧಿಕಾರಿಗಳು ಮಾಡುತ್ತಾರೆ ಎಂದು ತಾಕೀತು ಮಾಡಿದರು.