ವಿಜಯಪುರ: ಕರ್ತವ್ಯದ ಜೊತೆ ಕುಟುಂಬ ನಿರ್ವಹಣೆಗೂ ಪ್ರಾಧಾನ್ಯತೆ ಕೊಡಿ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಸಹಯೋಗದೊಂದಿಗೆ ಸೋಮವಾರ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒತ್ತಡ ನಿರ್ವಹಣೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ. ಕರ್ತವ್ಯ ನಿರ್ವಹಣೆಗೆ ಇಂಥ ಕಾರ್ಯಕ್ರಮಗಳು ಉತ್ತೇಜನ ನೀಡುತ್ತವೆ. ನೌಕರರು ಕರ್ತವ್ಯದ ಜೊತೆಗೆ ಕುಟುಂಬಕ್ಕೂ ಸಮಯ ಮೀಸಲಿಡಬೇಕು. ನೌಕರರ ಎಲ್ಲ ಸಮಸ್ಯೆಗಳಿಗೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಿರಂತರವಾಗಿ ನನ್ನ ಗಮನಕ್ಕೆ ತರುತ್ತಿದ್ದು, ನಾನು ಸಹ ಸ್ಪಂದಿಸುತ್ತಿದ್ದೇನೆ ಎಂದರು.
ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ಜಿಲ್ಲಾಡಳಿತದಿಂದ ಎಲ್ಲ ಇಲಾಖೆಗಳ ಕ್ರೀಡಾಕೂಟಗಳಿಗೆ ಉತ್ತೇಜನ ನೀಡಲಾಗಿದ್ದು, ಕರ್ತವ್ಯದ ಒತ್ತಡದ ಮಧ್ಯದಲ್ಲಿ ಆರೋಗ್ಯಯುತವಾದ ಜೀವನ ಸಾಗಿಸಲು ದೈಹಿಕ ಶ್ರಮ ಬಹಳ ಮುಖ್ಯವಾಗಿದೆ. ಈ ತಂತ್ರಜ್ಞಾನದ ಬಳಕೆಯಿಂದ ಕಚೇರಿ ಕೆಲಸದಲ್ಲಿ ದೈಹಿಕ ಶ್ರಮ ಕಡಿಮೆಯಾಗಿದ್ದು, ಈ ಕ್ರೀಡಾಕೂಟ ಏರ್ಪಡಿಸುವುದರಿಂದ ನೌಕರರು ದೈಹಿಕ ಶ್ರಮ ರೂಢಿಸಿಕೊಳ್ಳಬಹುದಾಗಿದೆ ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ, ಜಿಲ್ಲೆಯಲ್ಲಿ ನೌಕರರ ಸಂಘ ಜಿಲ್ಲಾಡಳಿತದೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದೆ. ಸರ್ಕಾರಿ ನೌಕರರ ಸಮಸ್ಯೆಗಳನ್ನು ಎದುರಿಸಲು ಬದ್ದರಾಗಿದೆ. ದಬ್ಬಾಳಿಕೆ, ಒತ್ತಡ, ಅನಧಿಕೃತ ವ್ಯಕ್ತಿಗಳ ಬೆದರಿಕೆಗಳಿಗೆ ಯಾವ ಸರ್ಕಾರಿ ನೌಕರರು ಹೆದರುವ ಅವಶ್ಯಕತೆ ಇಲ್ಲ. ಸದಾ ನಿಮ್ಮ ಸೇವೆಗೆ ಸರ್ಕಾರಿ ನೌಕರ ಸಂಘ ಇರುತ್ತದೆ ಎಂದರು.
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನೌಕರರು ಸದಾ ಕ್ರೀಯಾಶೀಲರಾಗಿರಬೇಕೆಂದರು.
ಎಸ್‌ಪಿ ಲಕ್ಷ್ಮಣ ನಿಂಬರಗಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜಾವೀದ ಜಮಾದಾರ, ಸಂಜೀವ ಖೋತ, ಮುಖಂಡ ಅಡಿವೆಪ್ಪ ಸಾಲಗಲ್ಲ, ನೌಕರರ ಸಂಘದ ರಾಜ್ಯ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ನೌಕರರ ಸಂಘದ ಖಜಾಂಚಿ ಜುಬೇರ ಕೆರೂರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ಪ್ರಧಾನ ಕಾರ್ಯದರ್ಶಿ ಶಿವರಾಜ ಬಿರಾದಾರ, ಕೋಶಾಧ್ಯಕ್ಷ ಪ್ರಕಾಶ ಗೊಂಗಡಿ, ಗೌರವಾಧ್ಯಕ್ಷ ವಿಶ್ವನಾಥ ಬೆಳ್ಳೆನವರ, ಹಿರಿಯ ಉಪಾಧ್ಯಕ್ಷ ಗಂಗಾಧರ ಜೇವೂರ, ಕ್ರೀಡಾ ಕಾರ್ಯದರ್ಶಿ ನೀಜು ಮೇಲಿನಕೇರಿ, ತಾಲೂಕು ಅಧ್ಯಕ್ಷ ಅಶೋಕ ತೆಲ್ಲೂರ, ಬಸವರಾಜ ಮಜ್ಜಗಿ, ಅರವಿಂದ ಹೂಗಾರ, ಬಿ.ಟಿ. ಗೌಡರ ಮತ್ತಿತರರಿದ್ದರು.
ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ಹಾಗೂ ಎಚ್.ಎ. ಮಮದಾಪುರ ನಿರ್ವಹಿಸಿದರು.