ಜಿಲ್ಲೆ

ಸಾಗರ ನೌಕಾಯಾನ ಯಾತ್ರೆ ಆರಂಭ

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಚಾಲನೆ

ನೌಕಾಪಡೆಯ 72 ಎನ್​ಸಿಸಿ ಕೆಡೆಟ್​ ಭಾಗಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಕರ್ನಾಟಕ ಮತ್ತು ಗೋವಾ ರಾಜ್ಯದ ನೌಕಾಪಡೆಯ ಎನ್​ಸಿಸಿ ಕೆಡೆಟ್​ಗಳು ಉಡುಪಿಯಿಂದು ಮಂಗಳೂರು ಬಂದರುವರೆಗೆ 15 ದಿನಗಳ ಕಾಲ ಸಾಗರ ನೌಕಾಯಾನ ಯಾತ್ರೆ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಈ ವಿಶೇಷ ಸ್ಪರ್ಧೆಗೆ ಸೋಮವಾರ (ಅ.6) ಚಾಲನೆ ನೀಡಿ ಶುಭ ಹಾರೈಸಿದರು.

ನೌಕಾಯಾನ ದಂಡಯಾತ್ರೆ ಶಿಬಿರದ ಕಮಾಂಡೆಂಟ್​ ಕಮಾಂಡರ್​ ಅಶ್ವಿನ್​ ಎಂ. ರಾವ್​ ಮಾತನಾಡಿ, ಯುವ ನಾವಿಕರು-ಬಲಿಷ್ಠ ಸಮುದ್ರದ ರಕ್ಷಕರು ಎಂಬ ಘೋಷಣೆಯೊಂದಿಗೆ ಈ ಯಾನ ನಡೆಯಲಿದೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆ ಇದಾಗಿದ್ದು, ಕರ್ನಾಟಕ ಮತ್ತು ಗೋವಾದ ಎನ್​ಸಿಸಿ ಕೆಡೆಟ್​ಗಳು ದೇಶಾದ್ಯಂತ 16 ಇತರ ಎನ್​ಸಿಸಿ ನಿರ್ದೇಶನಾಲಯಗಳ ಕೆಡೆಟ್​ಗಳ ವಿರುದ್ಧ ಸ್ಪರ್ಧಿಸಲಿದ್ದಾರೆ. ಕೆಡೆಟ್​ಗಳ ಕೌಶಲ, ಸಹಿಷ್ಣುತೆ ಮತ್ತು ತಂಡದ ಕೆಲಸದ ಸಮಗ್ರ ಸಾಗರ ನೌಕಾಯಾನ ಯಾತ್ರೆ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಬಿರದ ಸಹಾಯಕ ಮುಖ್ಯಸ್ಥೆ ಸಿಡಿಆರ್​ ಲಿಬಿನ್​ ಜಾನ್ಸನ್​, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್​.ಎಂ., ಸಿಡಿಎಫ್​ ನಿರ್ದೇಶಕ ಡಾ. ವಿಜಯೇಂದ್ರ ರಾವ್​, ಉಡುಪಿಯ ಶಾರದಾ ವಸತಿ ಶಾಲೆಯ ಪ್ರಾಂಶುಪಾಲ ಕೇಶವ್​ ಉಪಸ್ಥಿತರಿದ್ದರು.

ಆರು ತಂಡ, 219 ಕಿಮೀ ಪ್ರಯಾಣ

ಉಡುಪಿಯ ಉದ್ಯಾವರದ ಪಾಪನಾಶಿನಿ ನದಿಯಿಂದ ನೌಕಾಯಾನ ಆರಂಭಗೊಂಡಿದ್ದು, ಪಾಲ್ಗೊಂಡಿರುವ 72 ಕೆಡೆಟ್​ಗಳು ಮಲ್ಪೆ ಬಂದರಿನ ಮೂಲಕ ಸಾಗರ ಸಂಪರ್ಕಗೊಂಡು ಪ್ರಯಾಣ ಕೈಗೊಂಡಿದ್ದಾರೆ. ದಕ್ಷಿಣ ದಿಕ್ಕಿನತ್ತ ಸಾಗಿ ಮೂಲ್ಕಿ, ಸುರತ್ಕಲ್​ ಕರಾವಳಿ ಮಾರ್ಗವಾಗಿ ಸಾಗಿ ನವಮಂಗಳೂರು ಬಂದರಿನಲ್ಲಿ ಕೊನೆಗೊಳ್ಳುತ್ತದೆ. ಮತ್ತೆ ಅದೇ ಮಾರ್ಗವಾಗಿ ನೌಕಾಯಾನ ಹಿಂದಿರುಗಿ ಒಟ್ಟು 219 ಕಿಮೀ ಪ್ರಯಾಣಿಸಿ ಉಡುಪಿಗೆ ಮರಳಲಿದೆ. ಪ್ರತಿ ದೋಣಿಯಲ್ಲಿ ನಾಲ್ಕು ಹುಡುಗರು, ಇಬ್ಬರು ಹುಡುಗಿಯರು ಒಳಗೊಂಡ ಆರು ಕೆಡೆಟ್​ಗಳ ತಂಡ ಇರಲಿದೆ. 27 ಅಡಿ ಉದ್ದದ ಮೂರು ಡಿಕೆ ವೇಲರ್​ ಕ್ಲಾಸ್​ ದೋಣಿ ಸಜ್ಜುಗೊಳಿಸಲಾಗಿದೆ. ಅ.15ಕ್ಕೆ ನೌಕಾಯಾನ ಪೂರ್ಣಗೊಳ್ಳಲಿದೆ.