ಜಿಲ್ಲೆ

ಜಿಲ್ಲೆಯಲ್ಲಿ ಅತಿಯಾದ ಬಿಸಿಲು-ಬಿಸಿಗಾಳಿ

ಶಿವರಾಜ.ಎಂ

*ಮುಂಜಾಗ್ರತ ಕ್ರಮ ವಹಿಸಲು ಜಿಲ್ಲಾಧಿಕಾರಿ ಮನವಿ

*34 ಡಿಗ್ರಿ ಸೆಲ್ಸಿಯಸ್ ದಾಟಿದ ಉಷ್ಣಾಂಶ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಸಿಲು-ಬಿಸಿಗಾಳಿ ಪ್ರಮಾಣ ದುಪಟ್ಟಾಗಿದ್ದು, ಕಾದ ಕಾವಲಿಯಂತ ಸನ್ನಿವೇಶ ಕಂಡುಬರುತ್ತಿದೆ. ಈ ಪರಿಸ್ಥಿತಿ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಕೆ ನೀಡಿದ್ದಾರೆ.
ಹವಾಮಾನ ಇಲಾಖೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸ್ತುತ ದಿನಗಳಲ್ಲಿ ಉಷ್ಣಾಂಶ ಗರಿಷ್ಠ ತಾಪಮಾನ 34ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಬಗ್ಗೆ ವರದಿ ಮಾಡಿದ್ದು, ಅತಿಯಾದ ಬಿಸಿಲು ಮತ್ತು ಬಿಸಿ ಗಾಳಿ ಉಂಟಾಗಬಹುದೆಂದು ಮುನ್ಸೂಚನೆ ನೀಡಿದೆ. ಇದರಿಂದ ಜಿಲ್ಲೆಯ ಸಾರ್ವಜನಿಕರು ಬಿಸಿಲಿನ ಶಾಖದಿಂದ ತಪ್ಪಿಸಿಕೊಳ್ಳಲು ಕೆಲವೊಂದು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಅತಿಯಾದ ಬಿಸಿಲು ಹಾಗೂ ಬಿಸಿಗಾಳಿಯಿಂದ ಪ್ರತಿಯೊಬ್ಬರು ಸಾಧ್ಯವಾದಷ್ಟು ರಕ್ಷಣೆ ಪಡೆಯಲೇಬೇಕು ಅದರಲ್ಲೂ ಹಿರಿಯ ನಾಗರೀಕರು ಹಾಗೂ ಚಿಕ್ಕಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರತಿದಿನ ರೇಡಿಯೋ, ಟಿವಿ ದಿನಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಮುನ್ಸೂಚನೆಗಳನ್ನು ಗಮನಿಸಿ ಅದರನ್ವಯ ಮುಂಜಾಗ್ರತೆ ವಹಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಹಗುರವಾದ ತಿಳಿ ಬಣ್ಣದ ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸುವುದು ಹೆಚ್ಚು ಸೂಕ್ತ. ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಟೋಪಿ, ಬೂಟು ಅಥವಾ ಚಪ್ಪಲಿಗಳನ್ನು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಯಾಣಿಕರು ಎಚ್ಚರ ವಹಿಸಬೇಕು ಸಾಮಾನ್ಯವಾಗಿ ಜಿಲ್ಲೆಯ ನಾಲ್ಕೂ ತಾಲೂಕಿನಿಂದ ಪ್ರತಿದಿನ ಕೆಲಸಕ್ಕಾಗಿ ನಗರಪ್ರದೇಶಗಳ ಕಡೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಬಿಸಿಲ ಝಳಕ್ಕೆ ತಲೆಸುತ್ತು ಬರುವುದು, ವಾಂತಿ, ಸುಸ್ತಾಗುವುದು ಮತ್ತಿತರ ಗಂಭೀರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಸ್‌ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ನೀರಿನ ಬಾಟಲಿಯನ್ನು ಕೊಂಡೊಯ್ಯಬೇಕು ಎಂದು ಸಲಹೆ ನೀಡಿದ್ದಾರೆ. ಇದರ ಜತೆಗೆ ಒಆರ್‌ಎಸ್, ಮನೆಯಲ್ಲಿ ತಯಾರಿಸಿದ ಲಸ್ಸಿ, ಶರಬತ್, ಮಜ್ಜಿಗೆ ಪಾನೀಯಗಳಿದ್ದರೆ ಹೆಚ್ಚು ಅನುಕೂಲ ಎಂದು ತಿಳಿಸಿದ್ದಾರೆ. ಮನೆಯನ್ನು ತಂಪಾಗಿಸಿಕೊಳ್ಳುವುದು, ಒದ್ದೆಯಾದ ಬಟ್ಟೆಗಳನ್ನು ಬಳಸುವುದು ಮತ್ತು ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡುವುದು ಹಾಗೂ ತಂಪಾದ ಸಮಯದಲ್ಲಿ ಕೆಲಸ ಮಾಡುವುದು.


12ರಿಂದ 3 ಗಂಟೆಯ ಅವಧಿ ಅಪಾಯಕಾರಿ ಸಾಮಾನ್ಯವಾಗಿ ಮಧ್ಯಾಹ್ನ 12ರಿಂದ 3 ಗಂಟೆಯ ಅವಧಿಯಲ್ಲಿ ಬಿಸಿಲಿನ ಪ್ರಕರತೆ ತೀಕ್ಷ್ಣವಾಗಿರುತ್ತದೆ. ಈ ವೇಳೆ ಸಾಧ್ಯವಾದಷ್ಟು ಹೊರಬರದಂತೆ ಎಚ್ಚರಿಕೆ ವಹಿಸಬೇಕು. ಬಿಸಿಲಿನಲ್ಲಿ ತಾಸುಗಟ್ಟಲೆ ನಿಂತಿರುವ ವಾಹನಗಳನ್ನು ಹತ್ತುವುದನ್ನು ಮಾಡಬಾರದು, ಕಪ್ಪು ಬಟ್ಟೆ ಹೆಚ್ಚು ಬಿಸಿಲನ್ನು ಆಕರ್ಷಿಸುವುದರಿಂದ ಕಪ್ಪು ಬಟ್ಟೆ ಬಳಸಲೇಬಾರದು. ತೀವ್ರ ಬಿಸಿಲಿನ ಅವಧಿಯಲ್ಲಿ ದೈಹಿಕ ಶ್ರಮದ ಕೆಲಸ ಮಾಡಲು ಹೋಗದೇ ಮನೆಗಳಲ್ಲಿ ಸಮರ್ಪಕವಾಗಿ ಗಾಳಿಯಾಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಹಾನಿಕಾರಕ ತಂಪು ಪಾನೀಯ ಹಳಸಿದ ಆಹಾರವನ್ನು ಸೇವಿಸಬಾರದು ಎಂದು ಜಿಲ್ಲಾಧಿಕಾರಿ ಲತಾ ತಿಳಿಸಿದ್ದಾರೆ.