ಜಿಲ್ಲೆ

ಎಚ್.ಡಿ.ಕೋಟೆ ತಾಲೂಕು ಕಚೇರಿಗೆ ಡಿಸಿ ದಿಢೀರ್ ಭೇಟಿ

ಮಂಜುನಾಥ ತಿಮ್ಮಯ್ಯ

ಮೈಸೂರು: ಎಚ್.ಡಿ.ಕೋಟೆ ತಾಲೂಕು ಕಚೇರಿ ಹಾಗೂ ಹಂಪಾಪುರ ನಾಡಕಚೇರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ದಿಢೀರ್ ಭೇಟಿ ನೀಡಿ ಕಚೇರಿಯ ಸಮಸ್ಯೆ, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.


ಪೌತಿಖಾತೆ ಆಂದೋಲನವನ್ನು ಯಶಸ್ವಿಗೊಳಿಸುವಂತೆ, ಕೆರೆ ಒತ್ತುವರಿ ತೆರವುಗೊಳಿಸುವಂತೆ, ಬಗರ್‌ಹುಕುಂ ಮಂಜೂರಾತಿ ಕೋರಿ ಬಂದಿರುವ ಅರ್ಜಿಗಳ ವಿಲೇವಾರಿ ಬಗ್ಗೆ ಆ್ಯಪ್ ಮೂಲಕ ಕ್ರಮ ವಹಿಸುವಂತೆ ಕಚೇರಿಯ ಅಧಿಕಾರಿಗಳಿಗೆ ಸೂಚಿಸಿದರು.


ಸಕಾಲ ಅರ್ಜಿಗಳ ವಿಲೇವಾರಿ ಬಗ್ಗೆ ಕ್ರಮ ವಹಿಸಬೇಕು. ಭೂಮಿ ತಂತ್ರಾಂಶದಲ್ಲಿ ಖಾತೆ ಕಡತಗಳ ವಿಲೇವಾರಿಯನ್ನು ವಿಳಂಬ ಮಾಡದೆ ತ್ವರಿತವಾಗಿ ಮಾಡುವಂತೆ ಡಿಸಿ ತಾಕೀತು ಮಾಡಿದರು.


ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳನ್ನು ಪರಿಶೀಲಿಸಿ ವರದಿ ಮಾಡುವಂತೆ, ಇ-ಆಫೀಸ್ ತೆರೆದು ಕಂಪ್ಯೂಟರ್ ಮೂಲಕ ಕಡತಗಳ ವಿಲೇವಾರಿ ಮಾಡುವಂತೆ ಉಪ ತಹಸೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕರಿಗೆ ತಿಳಿಸಿದರು.


ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪ್ರತಿ ಗ್ರಾಮದ ಮಹಿಳೆಯರಿಗೆ ತಲುಪಿದೆ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಎಚ್.ಡಿ.ಕೋಟೆ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ಉಪತಹಸೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕರು ಉಪಸ್ಥಿತರಿದ್ದರು.