ಚನ್ನಪಟ್ಟಣ: ಯೋಗೇಶ್ವರ್ ಎಲ್ಲಿರುತ್ತಾರೋ ನಾವು ಅಲ್ಲಿರುತ್ತೇವೆ. ಅವರನ್ನು ಬೆಂಬಲಿಸಿ ಬಿಜೆಪಿ ಎಸ್‌ಸಿ- ಎಸ್ಟಿ ತಾಲೂಕು ಘಟಕದ ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿರುವುದಾಗಿ ಎಂದು ಜಿಪಂ ಮಾಜಿ ಸದಸ್ಯ ಸದಾನಂದ ತಿಳಿಸಿದರು.
ತಾಲೂಕಿನ ಮತ್ತೀಕೆರೆ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಗರ, ಗ್ರಾಮಾಂತರ ಹಾಗೂ ಮಹಿಳಾ ಎಸ್‌ಸಿ, ಎಸ್‌ಟಿ ಮೋರ್ಚಾದ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿ, ಯೋಗೇಶ್ವರ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದರು.
ಎನ್‌ಡಿಎ ಟಿಕೆಟ್‌ಗಾಗಿ ಗೊಂದಲ ಮೂಡಿದ್ದ ಸಂದರ್ಭದಲ್ಲೇ ನಾವು ಯೋಗೇಶ್ವರ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದೆವು. ಈಗ ಅದರಂತೆ ನಡೆದುಕೊಂಡಿದ್ದೇವೆ.
ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದವರು ಕಳೆದ ಆರು ವರ್ಷಗಳಿಂದ ಯಾರ ಕೈಗೂ ಸಿಗುತ್ತಿರಲಿಲ್ಲ. ತಾಲೂಕಿನ ಅಭಿವೃದ್ಧಿಗಾಗಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಅವರಿಗೆ ಸಹಕಾರ ನೀಡಲು ನಿರ್ಧರಿಸಿದ್ದೇವೆ ಎಂದರು.
ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾದ ನಂತರ ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿ ಪಕ್ಷದಿಂದ ಯಾರೂ ನಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ. ಅವರಿಗೆ ತಾಲೂಕು ಎಸ್‌ಸಿ- ಎಸ್‌ಟಿ ಘಟಕದ ಪದಾಧಿಕಾರಿಗಳು ಯಾರು ಎಂಬುದೇ ತಿಳಿದಿಲ್ಲ ಎಂದು ಆರೋಪಿಸಿದರು.
ಸಿಪಿವೈ ಬೆಂಬಲಿಸುವವರ ಉಚ್ಚಾಟನೆ! ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಜತೆ ಕಾಂಗ್ರೆಸ್‌ಗೆ ಹೋಗಿರುವವರು ಹಾಗೂ ಗುರುತಿಸಿಕೊಂಡಿರುವವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ ತಿಳಿಸಿದ್ದಾರೆ.