ರಾಮನಗರ : ಜಿಲ್ಲೆಯಲ್ಲಿ ಕರೊನಾ ಚಿಕಿತ್ಸೆಗಾಗಿ ಆಕ್ಸಿಜನ್ ಬೆಡ್‌ಗಳ ಕೊರತೆ ಇಲ್ಲ. ಆಸ್ಪತ್ರೆಯಲ್ಲಿ ವ್ಯವಸ್ಥಿತವಾಗಿ ಚಿಕಿತ್ಸೆ ನೀಡಲು ಒತ್ತು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ 394 ಬೆಡ್ ಇದ್ದು, 329 ಭರ್ತಿಯಾಗಿರುತ್ತದೆ. 71 ಐಸಿಯುಗಳಿದ್ದು, 43 ಭರ್ತಿಯಾಗಿರುತ್ತದೆ. 39 ವೆಂಟಿಲೇಟರ್‌ಗಳಿದ್ದು, 23 ಭರ್ತಿಯಾಗಿರುತ್ತದೆ ಎಂದು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೈಗಾರಿಕೆಗಳಿಂದ 211 ಮೆಡಿಕಲ್ ಆಕ್ಸಿಜನ್ ಸಂಗ್ರಹಿಸುವ ಸಿಲಿಂಡರ್‌ಗಳನ್ನು ಪಡೆಯಲಾಗಿದ್ದು ಹೆಚ್ಚುವರಿಯಾಗಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಇಡಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಚಿಕಿತ್ಸೆ ನೀಡಲು 15 ದಿನಗಳ ಕಾಲ ಸತತ ಕೆಲಸ ನಡೆಸಿ ಹೊಸ ಜಿಲ್ಲಾಸ್ಪತ್ರೆಯಲ್ಲಿ 131 ಬೆಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೆಚ್ಚುವರಿಯಾಗಿ 10 ವೆಂಟಿಲೇಟರ್ ಸಿದ್ಧಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿದಿನ 1400 ರಿಂದ 1500 ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ರೋಗ ಲಕ್ಷಣವುಳ್ಳವರು ಹಾಗೂ ಕೋವಿಡ್ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಹೆಚ್ಚು ಮಾಡಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆರ್‌ಎಟಿ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಂದು ಮತ್ತು ಎರಡನೇ ಅಲೆ ಲೆಕ್ಕಾಚಾರ ಮಾಡಿದರೆ ಪಾಸಿಟಿವಿಟಿ ರೇಟ್ 3.94 ಇದ್ದು, ಕಳೆದ ಒಂದು ವಾರದಲ್ಲಿ ಪಾಸಿಟಿವ್ ಪ್ರಮಾಣ ಶೇ11 ಇದೆ .ಮರಣ ಪ್ರಮಾಣ ಶೇ. 1.06 ಇದೆ ಎಂದು ತಿಳಿಸಿದರು. ಎಸ್‌ಪಿ ಗಿರೀಶ್ ಮಾತನಾಡಿ, ಮಾಸ್ಕ್‌ಗೆ ಸಂಬಂಧಿಸಿದಂತೆ 38,200 ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ. 846 ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ ಪದ್ಮಾ ಇತರರು ಇದ್ದರು.
405 ಹಾಸಿಗೆಗಳ ವ್ಯವಸ್ಥೆ :ಜಿಲ್ಲೆಯಲ್ಲಿ ಲಕ್ಷಣವಿಲ್ಲದ ಸೋಂಕಿತರು ಹಾಗೂ ಸಣ್ಣ ಲಕ್ಷಣವುಳ್ಳವರ ಚಿಕಿತ್ಸೆಯನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ನೀಡಲಾಗುತ್ತಿದೆ. 4 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 405 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, 276 ಭರ್ತಿಯಾಗಿರುತ್ತದೆ. ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. 2914 ಸೋಂಕಿತರಿಗೆ ಹೋಮ್ ಐಸೊಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಪ್ರತಿ ತಾಲೂಕಿನಲ್ಲಿ ಹೋಮ್ ಐಸೊಲೇಷನ್ ರೋಗಿಗಳ ಚಿಕಿತ್ಸೆಗಾಗಿ ಇಬ್ಬರು ಆರ್.ಬಿ.ಎಸ್.ಕೆ ವೈದ್ಯರನ್ನು ನಿಯೋಜಿಸಲಾಗಿದೆ. ರೋಗಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಾರ್ ರೂಂ ತೆರೆದು ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.