ಜಿಲ್ಲೆ

ತಿಂಗಳೊಳಗೆ ಹಕ್ಕುಪತ್ರ ವಿತರಿಸಿ

ಯಾದಗಿರಿ: ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಜಮೀನು ಗುರುತಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ, ವಸತಿ ಮತ್ತು ನಿವೇಶನಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕುವಾರು ವಸತಿ ರಹಿತರ ಪಟ್ಟಿಯ ಆಧಾರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನಗಳನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಗೆ ವಿಳಂಬಕ್ಕೆ ಆಸ್ಪದವಾಗದಂತೆ ಒಂದು ತಿಂಗಳೊಳಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಅವರು ಸೂಚಿಸಿದರು.

ಸರ್ಕಾರಿ ಜಮೀನನ್ನು ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಬೇಕು, ಒಂದು ವೇಳೆ ಲಭ್ಯವಾಗದಿದ್ದರೆ ಖಾಸಗಿ ಜಮೀನು ಗುರುತಿಸಿ, ಅಗತ್ಯ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಘನತ್ಯಾಜ್ಯ ನಿರ್ವಹಣೆಯನ್ನು ಜವಬ್ದಾರಿಯಿಂದ ನಿರ್ವಹಿಸಬೇಕು. ತ್ಯಾಜ್ಯವನ್ನು ಮನೆ-ಮನೆ ಹಾಗೂ ವಾರ್ಡ್ ವಾರು ಸಂಗ್ರಹಿಸಬೇಕು. ತ್ಯಾಜ್ಯ ನಿರ್ವಹಣಾ ಘಟಕಗಳ ಸಿವಿಲ್ ಕಾಮಗಾರಿಗಳನ್ನು ಮಾರ್ಚ್ಅಂತ್ಯದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪುತ, ಸಹಾಯಕ ಆಯುಕ್ತ ಶಂಕರ್ಗೌಡ ಸೋಮನಾಳ, ಜಿಪಂ ಯೋಜನಾ ನಿರ್ದೇಶಕ ಗುರುನಾಥ, ತಹಸೀಲ್ದಾರ ಚನ್ನಮಪ್ಪಲ್ಲ ಘಂಟಿ, ಸಂಗಮೇಶ ಜಿಡಗೆ, ಜಗನ್ನಾಥರೆಡ್ಡಿ, ತಾಪಂ ಇಒ ಬಸವರಾಜ ಶರಭೈ ಇದ್ದರು.