ಜಿಲ್ಲೆ

ಪ್ರತಿಭಾವಂತರನ್ನು ಪುರಸ್ಕರಿಸಿದ ಡಿಸಿ: ವೈಯಕ್ತಿಕವಾಗಿ ನಗದು ಬಹುಮಾನ ವಿತರಣೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ವೈಯಕ್ತಿಕವಾಗಿ ನಗದು ಬಹುಮಾನ ನೀಡುವ ಮೂಲಕ ಪ್ರೋತ್ಸಾಹಿಸಿದರು.

ನಗರದ ಡಿಸಿ ಕಚೇರಿಯ ಆವರಣದಲ್ಲಿ ಮಾಂಡವ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾರಾಣಿ ಮತ್ತು ಹೃತ್ವಿಕ್, ಸದ್ವಿದ್ಯಾ ಪದವಿ ಪೂರ್ವ ಕಾಲೇಜಿನ ಸ್ಪಟಿಕಾ, ದೀಪ್ತಿಶ್ರೀ, ಫಾತಿಮಾ, ದಿಗಂತ್, ಪ್ರಚೀತಾ, ಚಿನಕುರಳಿ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ, ನಾಗಮಂಗಲ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಸುಪ್ರಿಯಾ, ಬಾಲಕಿಯರ ಪದವಿ ಪೂರ್ವ ಕಾಲೇಜಿ(ಕಲ್ಲು ಕಟ್ಟಡ)ನ ಕೃಷ್ಣವೇಣಿ, ಬಸರಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಂಜುನಾಥ್, ಆಶೀರ್ವಾದ ಆಂಗ್ಲ ಮಾಧ್ಯಮ ಶಾಲೆಯ ಮೋಕ್ಷ ಲಕ್ಷ್ಮೀ, ಜೆ.ಜೆ ಪಬ್ಲಿಕ್ ಸ್ಕೂಲ್ನ ಪುಣ್ಯಶ್ರೀ, ನ್ಯೂ ಆಕ್ಸ್‌ವರ್ಡ್ ಸ್ಕೂಲ್‌ನ ಕುಶಿಕ ಆದರ್ಶ, ಕಿತ್ತೂರು ರಾಣಿ ಚೆನ್ನಮ್ಮ ರೆಸಿಡೆನ್ಸಿ ಸ್ಕೂಲ್ನ ಅರ್ಚನಾ, ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿನಂತಿ ಮನೋಹರಿ, ಸೇಂಟ್ ಜೋಸೆಫ್ ಸ್ಕೂಲ್ನ ರಶ್ಮಿತಾ ಅವರನ್ನು ಆಹ್ವಾನಿಸಿದ ಡಿಸಿ ನಗದು ಪುರಸ್ಕಾರ ನೀಡಿ ಗೌರವಿಸಿದರು.

ಬಳಿಕ ಮಾತನಾಡಿದ ಅವರು, ಪ್ರಸ್ತುತ ಸಾಕಷ್ಟು ಅವಕಾಶಗಳಿವೆ. ಸೌಲಭ್ಯ ಬಳಸಿಕೊಂಡು ಶಿಕ್ಷಣದಲ್ಲಿ ಸಾಧನೆ ಮಾಡಬೇಕು. ಉನ್ನತ ಹುದ್ದೆ ಅಲಂಕರಿಸಿದರೆ ಹಲವರಿಗೆ ನೆರವಾಗಬಹುದು. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಅಂತೆಯೇ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಜೀವನದಲ್ಲೂ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಡಿಡಿಪಿಐ ಎಸ್.ಟಿ.ಜವರೇಗೌಡ, ರೆಡ್‌ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.