ಜಿಲ್ಲೆ

ಶೇಡಿಬೇರು ಮಹಿಳೆಗೆ ಸಿಕ್ತು ಭೂಮಿ

Udupi

ಕುಂದಾಪುರ: ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದ ಶೇಡಿಬೇರು ನಿವಾಸಿ ಮಹಿಳೆಗೆ ನ್ಯಾಯ ಸಿಕ್ಕಿದೆ. ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಾಗವನ್ನು ಫಲಾನುಭವಿ ಕುಟುಂಬಕ್ಕೆ ನೀಡಿ ಜಿಲ್ಲಾಧಿಕಾರಿ ಜಿ.ಜಗದೀಶ ಆದೇಶಿಸುವ ಮೂಲಕ 30 ವರ್ಷಗಳ ಹೋರಾಟ ಕೊನೆಗೊಂಡಿದೆ.

ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮದ ಶೇಡಿಬೇರು ಎಂಬಲ್ಲಿ ರ್ವೇ ನಂಬರ್ 182ರಲ್ಲಿ ವನಜಾ ಕುಲಾಲ್ತಿ ತಾಯಿ ಹಾಗೂ ತಂದೆ ಹೆಸರಲ್ಲಿ 1.42 ಎಕರೆ ಜಾಗ ಮಂಜೂರಾಗಿತ್ತು. ನ್ಯಾಯಾಲಯದ ತೀರ್ಪು ಕೂಡ ವನಜಾ ಪರವಾಗಿದ್ದರೂ ಮಂಜೂರಾದ ಜಾಗವನ್ನೇ ಅಧಿಕಾರಿಗಳು ರದ್ದು ಮಾಡಿದ್ದರು. ಪ್ರಸ್ತುತ ಜಿಲ್ಲಾಧಿಕಾರಿ ಅದೇ ಜಾಗವನ್ನು ವನಜಾ ಕುಲಾಲ್ತಿ ಕುಟುಂಬಕ್ಕೆ ನೀಡುವಂತೆ ಆದೇಶಿಸಿದ್ದಾರೆ.

ಸರ್ಕಾರದಿಂದ ಗೇರು ಕೃಷಿ ಮಾಡಲು ಲೀಸಿಗೆ ಪಡೆದಿದ್ದು ಎಂದು ಮಂಜೂರಾದ ಜಾಗದ ವಿರುದ್ಧ ದೊಡ್ಡ ಹಿಡುವಳಿದಾರರೊಬ್ಬರು ತಗಾದೆ ತೆಗೆದಿದ್ದರು. ಗೇರು ಕೃಷಿ ಹೆಸರಲ್ಲಿ ಅಡಕೆ ತೋಟ ಮಾಡುವ ಮೂಲಕ ನಿಯಮ ಮುರಿಯಲಾಗಿತ್ತು. ಗೇರು ಕೃಷಿ ಲೀಸ್ ಪಡೆದ ಅವಧಿ ಮುಗಿದಿದ್ದು, ನಂತರ ಏನು ಎನ್ನುವುದಕ್ಕೆ ಸರ್ಕಾರದ ಮಾರ್ಗಸೂಚಿಯಿಲ್ಲದ ಕಾರಣ ಈ ಆದೇಶವಾಗಿದೆ. ಇನ್ನು ಕಂದಾಯ ಇಲಾಖೆ ಅಧಿಕಾರಿಗಳು ಜಾಗದ ಅಳತೆ, ಗಡಿ ಗುರುತು ಹಾಕಿ ದಾಖಲಾತಿ ನೀಡಿದರೆ ವನಜಾ ಕುಲಾಲ್ತಿ ಸುದೀರ್ಘ ಹೋರಾಟಕ್ಕೆ ಅಂಕದ ಪರದೆ ಬೀಳಲಿದೆ. ವಿಜಯವಾಣಿ ವನಜಾ ಕುಲಾಲ್ತಿ ಹೋರಾಟದ ಬಗ್ಗೆ ವಿಶೇಷ ವರದಿ ಮಾಡಿ ಬೆಳಕು ಚೆಲ್ಲಿತ್ತು.

ಮಂಜೂರಾದ ಜಾಗ ರದ್ದಾಗಿತ್ತು
ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ವನಜಾ ಕುಲಾಲ್ತಿ ಜಾಗದ ಬಗ್ಗೆ ಕುಂದಾಪುರ ಎಸಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಗೇರು ಲೀಸ್ ಪಡೆದ ವ್ಯಕ್ತಿಯ ಹಕ್ಕು ರದ್ದು ಮಾಡಿ, ಜಾಗ ಮಂಜೂರು ಮಾಡುವಂತೆ ಆದೇಶಿಸಿದ್ದರೂ ಅಂದಿನ ಎಸಿ ವನಜಾ ಕುಲಾಲ್ತಿಗೆ ಮಂಜೂರಾದ ಜಾಗ ರದ್ದು ಮಾಡಿದ್ದರು. ಸರ್ವೇ ನಂಬರ್ 182ರಲ್ಲಿ ವನಜಾ ಕುಲಾಲ್ತಿ ತಾಯಿ ವೆಂಕಿ ಕುಲಾಲ್ತಿ ಹಾಗೂ ತಂದೆ ಜೋನ್ ಮೇಸ್ತ್ರಿ ಹೆಸರಲ್ಲಿ ಜಾಗ ಮಂಜೂರಾದ ದಾಖಲೆ ಇತ್ತು. ಅಕ್ರಮ ಸಕ್ರಮದಲ್ಲಿ ವನಜಾ ಕುಲಾಲ್ತಿಗೆ ಪಾಲಕರಿಗೆ ಆದ ಮಂಜೂರಾತಿಯನ್ನೂ ರದ್ದು ಕೂಡ ಮಾಡಲಾಗಿತ್ತು.

ಬಡ ಕುಟುಂಬದವರು ಪರಿಶ್ರಮ ಪಟ್ಟು ತುಂಡು ಭೂಮಿಗಾಗಿ ಬಹಳ ವರ್ಷದಿಂದ ಶ್ರಮ ಪಡುತ್ತಿದ್ದರು. ಜಿಲ್ಲಾಧಿಕಾರಿ ಕಾನೂನುಬದ್ಧವಾಗಿ ಜಾಗ ಮಂಜೂರು ಮಾಡಿದ್ದಾರೆ. ಜಾಗದ ಹಕ್ಕಿಗಾಗಿ ಅಲೆದ ಮಹಿಳೆಗೆ ಸಾಮಾಜಿಕ ನ್ಯಾಯ ಸಿಕ್ಕಿರುವುದು ಸತ್ಯಕ್ಕೆ ಜಯ ಸಿಕ್ಕುತ್ತದೆ ಎಂಬುದಕ್ಕೆ ನಿದರ್ಶನ. ನಮ್ಮ ಇಲಾಖೆ ಮೂಲಕ ವನಜಾ ಕುಲಾಲ್ತಿ ಅವರಿಗೆ ಸಹಕಾರ ನೀಡುವಂತೆ ಸೂಚಿಸಿದ್ದು, ವಿಜಯವಾಣಿ ಜನಪರ ಕಾಳಜಿ ಶ್ಲಾಘನೀಯ.
ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ

ಜಿಲ್ಲಾಧಿಕಾರಿ ಆದೇಶದಿಂದ ಸಮಾಧಾನವಾಗಿದೆ. ಬೈಂದೂರು ತಹಸೀಲ್ದಾರ್ ಜಾಗದ ಅಳತೆ ಮಾಡಿಸಿ, ಆರ್‌ಟಿಸಿ ನೀಡುವ ಮೂಲಕ ಜಾಗದ ಬಂದೋಬಸ್ತ್ ಮಾಡಲು ಸಹಕಾರ ನೀಡಬೇಕು. ಸಚಿವ ಕೋಟ ಶ್ರೀನಿವಾಸ ಪೂಜಾರಿ ನಮ್ಮ ಕಷ್ಟಕ್ಕೆ ನೆರವು ನೀಡಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿದ್ದ ನಮ್ಮ ಕುಟುಂಬದ ಭೂಮಿ ಹಕ್ಕಿನ ಹೋರಾಟಕ್ಕೆ ವಿಜಯವಾಣಿ ಬಂದಿದ್ದರಿಂದ ಹೊರ ಪ್ರಪಂಚದ ಕಣ್ಣು ತೆರೆಸಲು ಸಹಕಾರಿಯಾಯಿತು. ನಮಗೆ ನಮ್ಮ ಭೂಮಿ ನೀಡಲು ಸಹಕರಿಸಿದ ಎಲ್ಲರಿಗೂ ಕೃತಜ್ಞಳಾಗಿದ್ದೇನೆ.
ವನಜಾ ಕುಲಾಲ್ತಿ
ಶೇಡಿಬೇರು ಭೂಮಿ ಹಕ್ಕಿಗಾಗಿ ಅಲೆದಾಡಿದ ಮಹಿಳೆ