ಜಿಲ್ಲೆ

ಏಕವಿನ್ಯಾಸ ನಕ್ಷೆಗೆ ಹೊಸ ಅಧಿಸೂಚನೆ ಕೆಲವು ವಿನಾಯಿತಿ ಅಗತ್ಯ

ಉಡುಪಿ: ಹೊಸ ಅಧಿಸೂಚನೆಯ ಪ್ರಕಾರ ಜಿಲ್ಲೆಯಲ್ಲಿ ಸಾರ್ವಜನಿಕರು ಕಟ್ಟಡ ನಿಮಾರ್ಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಕೆಲವು ವಿನಾಯಿತಿ ನೀಡುವ ಅಗತ್ಯವಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಸುತ್ತಾಡಿದರೂ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೊಸ ಅಧಿಸೂಚನೆಯ ಪ್ರಕಾರ ಎಲ್ಲಾ ಅರ್ಜಿಗಳಿಗೆ ಅನುಮೋದನೆ ನೀಡಲೂ ಸಹ ಕಷ್ಟಸಾಧ್ಯವಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ರಕರಣ ಎಂದು ತಿಳಿದು ಸರ್ಕಾರ ಕೆಲವೊಂದು ವಿನಾಯಿತಿಗಳನ್ನು ನೀಡುವ ಅಗತ್ಯವಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಜಿಲ್ಲೆಯ ಜನ ಸಾಮಾನ್ಯರಿಗೆ ಕಟ್ಟಡ ನಿಮಾರ್ಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ಮತ್ತಿತರ ದಾಖಲೆಗಳನ್ನು ಪಡೆಯಲು ಆಗುತ್ತಿರುವ ತೊಂದರೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಮುಂದಿನ ಐದು ದಿನಗಳ ಒಳಗಾಗಿ ಭಾಗೀಧಾರರ ಸಭೆಯನ್ನು ಕರೆದು ಅಹವಾಲುಗಳನ್ನು ಕೇಳಿ, ಸಮಸ್ಯೆಗಳ ಪಟ್ಟಿಯನ್ನು ಕ್ರೂಢಿಕರಣಗೊಳಿಸಲಾಗುವುದು ಎಂದು ತಿಳಿಸಿದರು.

ಶಾಸಕ ಸುನೀಲ್​ ಕುಮಾರ್​ ಮಾತನಾಡಿ, ಪ್ರಾಧಿಕಾರ ಹೊಸ ಅಧಿಸೂಚನೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದರು. ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸಭೆಗಳನ್ನು ಕರೆದಾಗ ಸಭೆಯ ನಡುವಳಿಯನ್ನು ದಾಖಲಿಸಿದ್ದಲ್ಲಿ ಮುಂದಿನ ಸಭೆಗಳಲ್ಲಿ ನಡುವಳಿ ಆಧಾರದ ಮೇಲೆ ಸಭೆಯನ್ನು ಮುಂದುವರೆಸಲು ಅನುಕೂಲವಾಗುತ್ತದೆ. ಆದರೆ ಕಳೆದ ಸಭೆಯ ನಡುವಳಿಯನ್ನು ದಾಖಲಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಕಿರಣ್​ ಕುಮಾರ್​ ಕೊಡ್ಗಿ ಮಾತನಾಡಿ, ಲೋಕೋಪಯೋಗಿ ಇಲಾಖೆ ರಸ್ತೆಯ ಅಂಚಿನಿಂದ ಗೃಹ ನಿಮಾರ್ಣಕ್ಕೆ 6 ಮೀ. ಬಿಟ್ಟು ಏಕವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕು. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದರು.

ಶಾಸಕರಾದ ಗುರ್ಮೆ ಸುರೇಶ್​ ಶೆಟ್ಟಿ , ಯಶ್​ಪಾಲ್​ ಸುವರ್ಣ ಹಾಗೂ ಗುರುರಾಜ್​ ಶೆಟ್ಟಿ ಗಂಟಿಹೊಳೆ, ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ ಮತ್ತಿತರರು ಉಪಸ್ಥಿತರಿದ್ದರು.