ಜಿಲ್ಲೆ

ಕೆಂಪು ಕಲ್ಲು ಮರಳು ಸಮಸ್ಯೆ ವಿರುದ್ಧ ಡಿಸಿ ಕಚೇರಿಗೆ ಮುತ್ತಿಗೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕಾರ್ಮಿಕರು ಕಳೆದ ಮೂರು ದಿನಗಳಿಂದ ಕೆಂಪು ಕಲ್ಲು ಮರಳು ಸಮಸ್ಯೆ ಬಗೆಹರಿಸಲು ಧರಣಿ ಕುಳಿತಿದ್ದಾರೆ. ಕಾರ್ಮಿಕರು ಕೆಲಸ ಕೇಳುತ್ತಿರುವುದು ಚಿನ್ನ ಖರೀದಿಗಲ್ಲ. ಅನ್ನ ತಿನ್ನಲು. ಈ ಸಮಸ್ಯೆ ಬಗೆಹರಿಸಬೇಕಾದದ್ದು ಜಿಲ್ಲಾಡಳಿತದ ಕರ್ತವ್ಯ.ಕೆಂಬಾವುಟದ ಕಾರ್ಮಿಕರಿಗೆ ಹೋರಾಟವೇ ಅಸ್ತ್ರ ಎಂದು ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಕೆಂಪು ಕಲ್ಲು ಮರಳು ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಆ. 18ರಿಂದ ನಡೆಯುತ್ತಿರುವ ಅರ್ನಿಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್​ ಕಲ್ಲಾಗರ ಮಾತನಾಡಿ, ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯದ ಕಾಂಗ್ರೆಸ್​ ಹಾಗೂ ಪ್ರತಿಪಕ್ಷ ಬಿಜೆಪಿ ಶಾಸಕರು ವಿಫಲರಾಗಿದ್ದಾರೆ. ಅಧಿಕಾರಿಗಳು ಕಠಿಣ ಕ್ರಮ ಜರುಗಿಸಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಇದು ಬಡ ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಜಿಲ್ಲಾ ಕಟ್ಟಡ ಮತ್ತು ನಿಮಾರ್ಣ ಕಾರ್ಮಿಕರ ಸಂಘದ ಅಧ್ಯಕ್ಷ ಸುಭಾಷ್​ ಚಂದ್ರ ನಾಯಕ್​, ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ, ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ್​ ಪಡುಕೋಣೆ, ಕಾರ್ಯದರ್ಶಿ ರೊನಾಲ್ಡ್​ ರಾಜೇಶ್​ ಕ್ವಾಡ್ರಸ್​,ಸಿಐಟಿಯು ಮುಖಂಡರಾದ ಎಚ್​ ನರಸಿಂಹ ಚಂದ್ರಶೇಖರ ವಿ, ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್​ ಎಸ್​ ಕಾಂಚನ್​, ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ ಶಂಕರ್​ ಮೊದಲಾದವರಿದ್ದರು.

ಆ. 30 ರಂದು ಜಂಟಿ ಸಭೆ

ಅಪರ ಜಿಲ್ಲಾಧಿಕಾರಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಲು ಆಗಮಿಸಿದರು. ಆದರೆ ಪ್ರತಿಭಟನಾಕಾರರು ಕೇವಲ ಮನವಿ ಸ್ವೀಕರಿಸಿದರೆ ಸಾಲದು ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿ ಜಂಟಿ ಸಭೆ ನಡೆಸಬೇಕು. ಈ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ನಂತರ ಆ. 30 ರಂದು ಜಂಟಿ ಸಭೆ ನಡೆಸಲು ಅಪರ ಜಿಲ್ಲಾಧಿಕಾರಿ ಒಪ್ಪಿ ಲಿಖಿತ ಆದೇಶ ನೀಡಿದ ನಂತರ ಧರಣಿ ವಾಪಸ್​ ಪಡೆಯಲಾಯಿತು.