ಮತದಾನ ಜಾಗೃತಿ ಕಾರ್ಯಕ್ರಮ 
ಜಿಲ್ಲೆ

ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸಿ

ಶಿವರಾಜ.ಎಂ

ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಕರೆ

ಜಿಲ್ಲಾಡಳಿತಭವನದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಏ.26 ರಂದು ನಡೆಯುವ ಮತದಾನದ ದಿನದಂದು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಪ್ರತಿ ಮತದಾರರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ಶಿವಶಂಕರ್ ಕರೆ ನೀಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸೋಮವಾರ ದೇವನಹಳ್ಳಿಯ ಜಿಲ್ಲಾಡಳಿತಭವನ ಆವರಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಗರಿಷ್ಟ ಪ್ರಮಾಣದಲ್ಲಿ ಮತದಾನವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತಷ್ಟು ಮತದಾನ ಹೆಚ್ಚಿಸುವ ಸಂಬಂಧ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಮತದಾನ ದೇಶದ ಹಬ್ಬವಿದ್ದಂತೆ ಸಧೃಡ ದೇಶ ನಿರ್ಮಾಣ ಮಾಡಲು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ತಪ್ಪದೇ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದು ಹೇಳಿದರು. ಚುನಾವಣೆ ವೇಳೆ ಯಾವುದೇ ಅಕ್ರಮ ನಡೆಯದಂತೆ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ 21 ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದು ವಾಹನಗಳ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ ಎಂದರು. ಅದೇ ರೀತಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಉಡುಗೊರೆ ಹಂಚಿಕೆ ಸೇರಿ ಯಾವುದೇ ಅಕ್ರಮಗಳು ಕಂಡುಬಂದರೆ ಮಾಹಿತಿ ನೀಡುವಂತೆ ಹೆಲ್ಪ್‌ಲೈನ್ ವ್ಯವಸ್ಥೆ ಮಾಡಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮತದಾನದ ಆಶಯ:
ಈ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕೆಂಬ ಆಶಯದೊಂದಿಗೆ ಜಿಲ್ಲೆಯಾದ್ಯಂತ ಸ್ವೀಪ್ ಸಮಿತಿ ವತಿಯಿಂದ ವಿಭಿನ್ನವಾಗಿ ಸಾಕಷ್ಟು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತಪ್ಪದೇ ನಿರ್ಭೀತಿಯಿಂದ ಮತ ಚಲಾಯಿಸಿ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ಎನ್ ಅನುರಾಧಾ ತಿಳಿಸಿದರು. ಚೆಕ್‌ಪೋಸ್ಟ್‌ಗಳಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯನಿರ್ವಹಣೆ ಬಗ್ಗೆ ಡಿಸಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಖುದ್ದು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಅವನ್ನು ಮಾನಿಟರ್ ಮಾಡಲು ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಸಾಧಕರಿಂದ ಜಾಗೃತಿ:
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲಾ ಐಕಾನ್ ಆಗಿ ಕಾಮಿಡಿ ಕಿಲಾಡಿ ನಟ ರಘು, ಲಿಂಗತ್ವ ಅಲ್ಪಸಂಖ್ಯಾತರ ಕ್ಷೇತ್ರದಿಂದ ಅದ್ಯಾ ಮತ್ತು ವಿಕಲಚೇತನರ ಕ್ಷೇತ್ರದಿಂದ ಪ್ಯಾರ ಕ್ರೀಡಾ ಪಟು ಪ್ರಕಾಶ್ ಅವರು ಭಾಗವಹಿಸಿ ಎಲ್ಲರು ತಪ್ಪದೇ ಮತದಾನದ ಹಕ್ಕು ಚಲಾಯಿಸಿ ಎಂದು ಮತದಾನ ಜಾಗೃತಿ ಮೂಡಿಸಿದರು.
ಗಮನ ಸೆಳೆದ ಹಾಟ್ ಬಲೂನ್:
ಮತದಾನ ಜಾಗೃತಿಗಾಗಿ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹಾಟ್‌ಏತ್‌ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದ್ದು ಗಮನ ಸೆಳೆಯಿತು. ಮತದಾನ ಜಾಗೃತಿ ಸಹಿ ಸಂಗ್ರಹ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಸೇರಿ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಸಹಿ ಹಾಕಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.ಜಿಲ್ಲಾಡಳಿತ ಕಟ್ಟಡದ ಮೇಲೆ ಮತದಾನ ಜಾಗೃತಿಗಾಗಿ ಹಾಟ್ ಏರ್‌ಬಲೂನ್ ಹಾರಾಟ ಹಾಗೂ ಮತದಾನ ಜಾಗೃತಿ ಸಹಿ ಸಂಗ್ರಹ ಅಭಿಯಾನ ವಿಶೇಷವಾಗಿ ಗಮನ ಸೆಳೆಯಿತು.