ಜಿಲ್ಲೆ

ನೀತಿ ಸಂಹಿತೆ ಪಾಲನೆಗೆ ಡಿಸಿ ಸೂಚನೆ, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ, ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ

Bengaluru Rural

ಬೆಂಗಳೂರು ಗ್ರಾಮಾಂತರ: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣಾ ಸಂಬಂಧ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸೆ.29 ರಿಂದಲೇ ಮಾದರಿ ನೀತಿ ಸಂಹಿತೆ ಜಿಲ್ಲಾ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದು, ನ.5ರ ವರೆಗೆ ಚಾಲ್ತಿಯಲ್ಲಿರುತ್ತದೆ. ಸುಗಮ ಹಾಗೂ ಶಾಂತಿಯುತ ಚುನಾವಣೆ ಮತ್ತು ಕರೊನಾ ನಿಯಮಗಳ ಪಾಲನೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಜಿಲ್ಲೆಗೆ ಸಂಬಂಧಿಸಿದ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕಾರ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದ್ದು, ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಮತದಾನ ಕೇಂದ್ರಗಳಿಗೆ ಕಳುಹಿಸಲು ಹಾಗೂ ಡಿ-ಮಸ್ಟರಿಂಗ್ ಕೇಂದ್ರಕ್ಕೆ ಕರೆತರಲು ವಾಹನಗಳ ಅವಶ್ಯಕತೆಯಿದ್ದು, ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಲಭ್ಯವಿರುವ ವಾಹನಗಳನ್ನು ಕಾರ್ಯಕ್ಕೆ ನಿಯೋಜಿಸಿಕೊಳ್ಳಬೇಕು ಎಂದು ಡಿಸಿ ತಿಳಿಸಿದರು.

ಮತಗಟ್ಟೆ ಕಾರ್ಯಕ್ಕೆ ನಿಯೋಜಿಸಬೇಕಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ಅ. 16, 20 ಹಾಗೂ 27ರಂದು ತರಬೇತಿ ಆಯೋಜಿಸಲಾಗಿದೆ ಎಂದು ಹೇಳಿದರು.

ಅ.28ರಂದು ಮತದಾನ: ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ನ.2 ರಂದು ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 17 ಮತಗಟ್ಟೆ ಸ್ಥಾಪಿಸಲಾಗಿದ್ದು, ನೆಲಮಂಗಲ ತಾಲೂಕಿನಲ್ಲಿ 3, ದೊಡ್ಡಬಳ್ಳಾಪುರ 5, ಹೊಸಕೋಟೆ 5 ಹಾಗೂ ದೇವನಹಳ್ಳಿ ತಾಲೂಕಿನಲ್ಲಿ 4 ಮತಗಟ್ಟೆ ಸ್ಥಾಪಿಸಲಾಗಿದೆ. ಕೇಂದ್ರಗಳಲ್ಲಿ ಅವಶ್ಯ ಸೌಲಭ್ಯಗಳು ಲಭ್ಯವಿರುವ ಬಗ್ಗೆ ಸಂಬಂಧಪಟ್ಟ ತಹಸೀಲ್ದಾರ್‌ಗಳು ಭೇಟಿ ನೀಡಿ ವರದಿ ನೀಡಬೇಕು ಎಂದು ಡಿಸಿ ತಿಳಿಸಿದರು.

ನೋಡಲ್ ಅಧಿಕಾರಿಗಳ ನೇಮಕ: ಚುನಾವಣಾ ಮಾದರಿ ನೀತಿ ಸಂಹಿತೆ, ಕೋವಿಡ್ ನಿಯಮಗಳ ಪಾಲನೆ ಹಾಗೂ ಚುನಾವಣಾ ದೂರು ಸ್ವೀಕಾರಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಫ್ಲೈಯಿಂಗ್ ಸ್ಕ್ವ್ಯಾಡ್, ವಿಡಿಯೋ ವಿಕ್ಷಕರ ತಂಡ, ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿ ಹೇಳಿದರು.