ಜಿಲ್ಲೆ

ಇನ್ಮುಂದೆ ಅಸ್ತಿ ವಿಸರ್ಜನೆಗೆ ಮಾನದಂಡ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ ನೀರು ಮಲಿನಗೊಳಿಸುವುದನ್ನು ತಡೆಗಟ್ಟಲು ನಿಯಮಗಳನ್ನು ರೂಪಿಸಿ ಏಜೆನ್ಸಿಗೆ ಟೆಂಡರ್ ನೀಡಲಾಗಿದೆ. ಸಾರ್ವಜನಿಕರು ನಿಯಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾವೇರಿ ನದಿ ಪಾತ್ರದಲ್ಲಿ ಅಸ್ತಿ ವಿಸರ್ಜನೆ ಸೇರಿದಂತೆ ಸ್ನಾನ ಮಾಡಿದ ನಂತರ ಬಟ್ಟೆಗಳನ್ನು ನೀರಿಗೆ ಬಿಸಾಡುವುದು ಸಾಮಾನ್ಯವಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಮಾಲಿನ್ಯವನ್ನು ತಡೆಗಟ್ಟಲು ಅಸ್ತಿ ವಿಸರ್ಜನೆಗೆ ದರ ನಿಗದಿಪಡಿಸಿ ನೋಡಿಕೊಳ್ಳಲು ಏಜೆನ್ಸಿಯನ್ನು ನೇಮಕ ಮಾಡಲಾಗಿದೆ ಎಂದರು.

ಕಾವೇರಿ ನದಿ ಪಾತ್ರದ ಗೋಸಾಯಿ ಘಾಟ್, ಕಾವೇರಿ ಸಂಗಮ, ಪಶ್ಚಿಮ ವಾಹಿನಿ, ಸ್ನಾನ ಘಟ್ಟಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಅಸ್ತಿ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಏಜೆನ್ಸಿ ಅವರು ಸ್ನಾನ ಮಾಡಿದ ನಂತರ ಸಾರ್ವಜನಿಕರಿಗೆ ಬಟ್ಟೆ ಬದಲಾಯಿಸಲು ಕೊಠಡಿಗಳ ವ್ಯವಸ್ಥೆ ಮಾಡಬೇಕು. ಹಸಿ ಬಟ್ಟೆಗಳು, ಹೂವು, ಹಣ್ಣು ಇತರೆ ಪದಾರ್ಥಗಳನ್ನು ವಿಲೇವಾರಿ ಮಾಡಲು ಅಗತ್ಯ ಕಸದ ಬುಟ್ಟಿಗಳನ್ನು ಇಡಬೇಕು. ಇವುಗಳ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳು ಅಸ್ತಿ ವಿಸರ್ಜನೆಗೆ ನಿಗದಿಪಡಿಸಿರುವ ಸ್ಥಳಗಳನ್ನು ಹೊರತುಪಡಿಸಿ ಸಾರ್ವಜನಿಕರು ಕಾವೇರಿ ನದಿ ಪಾತ್ರದ ಬೇರೆ ಸ್ಥಳಗಳಲ್ಲಿ ಅಸ್ತಿ ವಿಸರ್ಜನೆ ಮಾಡದಂತೆ ಪರಿಶೀಲನೆ ನಡೆಸಿ. ಜಲ ಮೂಲಗಳನ್ನು ಕಾಪಾಡುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಸಾರ್ವಜನಿಕರು ಸಹ ಸಾಮಾಜಿಕ ಹೊಣೆಗಾರಿಕೆಯಿಂದ ಜಲ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡಬೇಕು. ಹರಿಯುವ ನದಿಗಳಿಗೆ ಕೆರೆ ಕಟ್ಟೆಗಳಿಗೆ ತ್ಯಾಜ್ಯ ವಸ್ತುಗಳನ್ನು ಹಾಕುವುದನ್ನು ನಿಲ್ಲಿಸುವುದರ ಜತೆಗೆ ಅವುಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಅಧಿಕಾರಿಗಳು ಕಾವೇರಿ ನದಿ ಪಾತ್ರದಲ್ಲಿ ಅಸ್ತಿ ವಿಸರ್ಜನೆ ಮಾಡುವ ಅರ್ಚಕರ ಪಟ್ಟಿಯನ್ನು ಸಿದ್ಧಪಡಿಸಿ, ಪುರೋಹಿತರೊಂದಿಗೆ ಸಭೆ ನಡೆಸಿ ಅವರಿಗೆ ಯಾವುದೇ ತ್ಯಾಜ್ಯಗಳನ್ನು ನೀರಿಗೆ ಬಿಸಾಡದಂತೆ ತಿಳಿವಳಿಕೆ ನೀಡಿ. ಅಸ್ತಿ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಶೌಚಗೃಹ ವ್ಯವಸ್ಥೆ, ಹಸಿ ಬಟ್ಟೆಗಳನ್ನು ತ್ಯಾಜ್ಯಗಳನ್ನು ಬಿಸಾಡಲು ಕಸದ ಬುಟ್ಟಿ ಇರಿಸಿ. ಸಾರ್ವಜನಿಕರಿಗೆ ತ್ಯಾಜ್ಯಗಳನ್ನು ನೀರಿಗೆ ಎಸೆಯಬಾರದು ಎಂಬುದನ್ನು ಧ್ವನಿ ವರ್ಧಕ ಬಳಸುವ ಮೂಲಕ ಜಾಗೃತಿ ಮೂಡಿಸಿ. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ನಮ್ಮ ಜಲ ಸಂಪನ್ಮೂಲವನ್ನು ಸಂರಕ್ಷಣೆ ಮಾಡದೆ ಹೋದರೆ ನಮ್ಮ ಮುಂದಿನ ಪೀಳಿಗೆ ನೀರಿಲ್ಲದೆ ಪರದಾಡುತ್ತಿರುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರತಾಪ್, ನಗರಸಭೆ ಪೌರಾಯುಕ್ತೆ ಪಂಪಶ್ರೀ ಇತರರಿದ್ದರು.