ಮಂಡ್ಯ: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೇ 28 ರಿಂದ 31ರವರೆಗೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಲಿದ್ದಾರೆ. ಈ ಬಗ್ಗೆ ಗ್ರಾಮಗಳಲ್ಲೂ ಹೆಚ್ಚಿನ ಪ್ರಚಾರ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ಸೂಚನೆ ಹಾಗೂ ಆದೇಶಗಳನ್ವಯ ಕಾರ್ಯನಿರ್ವಹಿಸಿ. ಕಾರಣಾಂತರಗಳಿಂದ ಯಾವುದಾದರೂ ಕಡತಗಳು ಹಾಗೂ ಸಾರ್ವಜನಿಕರ ಕೆಲಸ ಬಾಕಿ ಇದ್ದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಿ ಎಂದರು.
ಜಿಲ್ಲೆಯ ಎಲ್ಲ ತಾಲೂಕು ಹಾಗೂ ಗ್ರಾಮಮಟ್ಟದ ಅಧಿಕಾರಿಗಳು 28 ರಿಂದ 31 ರವರೆಗೆ ರಜೆ ಪಡೆಯಲು ಅವಕಾಶವಿಲ್ಲ. ಮಾತ್ರವಲ್ಲದೆ ಕೇಂದ್ರ ಸ್ಥಾನದಲ್ಲಿ ಇರಬೇಕು. ಜತೆಗೆ ತಮ್ಮ ಕಚೇರಿ ಸಿಬ್ಬಂದಿಗೆ ಸಲಹೆ ಹಾಗೂ ಸೂಚನೆ ನೀಡಬೇಕು. ಜಿಲ್ಲೆಗೆ ಸಂಬಂಧಿಸಿದ ಸುಮಾರು 156 ದೂರು ಅರ್ಜಿಗೆ ಕ್ರಮ ಕೈಗೊಂಡು ಉತ್ತರ ನೀಡುವಂತೆ ನಿರ್ದೇಶನ ನೀಡಲಾಗಿದೆ. ಆಯಾ ಇಲಾಖೆ ಅವರು ಮಾಹಿತಿ ನೀಡಿ ಶೇ.100 ರಷ್ಟು ಜಿಲ್ಲೆಯಲ್ಲಿ ಸಾಧನೆಯಾಗಬೇಕು. ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಯಿಂದ ಇಲಾಖಾವಾರು ಸಿಬ್ಬಂದಿ ನಿಯೋಜಿಸಿದೆ ಎಂದು ಹೇಳಿದರು.
ತನಿಖೆಗೆ ಬಾಕಿ ಇರುವ ಪ್ರಕರಣಗಳನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಚಾರಣೆ ನಡೆಸಲಿದ್ದಾರೆ. ಜತೆಗೆ ಸಾರ್ವಜನಿಕರಿಂದ ದೂರು ಸಹ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಆಸನದ ವ್ಯವಸ್ಥೆ, ಸಾರ್ವಜನಿಕರ ವಿವರಗಳು ನೋಂದಣಿ ಮಾಡಿಕೊಳ್ಳಲು ಸ್ಥಳದಲ್ಲಿ ಕಂಪ್ಯೂಟರ್ ಹಾಗೂ ಆಪರೇಟರ್‌ಗಳು, ಇಂಟರ್‌ನೆಟ್ ಹಾಗೂ ಸ್ಟೆನೋಗ್ರಾಫರ್ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್‌ಬಾಬು ಮಾತನಾಡಿ, ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಯ್ಯ ಅವರು ಸಾರ್ವಜನಿಕರಿಂದ ದೂರು ಸ್ವೀಕರಿಸುವ ವಿಷಯದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಕಚೇರಿ ಮುಖ್ಯಸ್ಥರು ತಮ್ಮ ಕಚೇರಿಯ ಕೆಲಸಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಲೋಕಾಯುಕ್ತ ಡಿವೈಎಸ್ಪಿ ಸುನೀಲ್, ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀ, ಮುಖ್ಯ ಯೋಜನಾಧಿಕಾರಿ ಧನುಷ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.