ಜಿಲ್ಲೆ

ಫೈನಾನ್ಸ್ ಕಂಪನಿಗಳಿಂದ ಕಿರುಕುಳ: ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಕೊಡಲು ಜಿಲ್ಲಾಧಿಕಾರಿ ಸೂಚನೆ

ಮಂಡ್ಯ: ಭೀಕರ ಬರದಿಂದಾಗಿ ನಷ್ಟದಲ್ಲಿರುವ ರೈತರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ತುರ್ತು ಕ್ರಮಕ್ಕೆ ಮುಂದಾಗಿದ್ದಾರೆ. ಅದರಂತೆ ಮೈಕ್ರೋ ಫೈನಾನ್ಸ್ ಕಂಪನಿಯವರು ರೈತರು ಮತ್ತು ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲಾತಿ ಮಾಡುವ ಸಂದರ್ಭದಲ್ಲಿ ಅವರ ಮೇಲೆ ಯಾವುದೇ ತರಹ ಕಿರುಕುಳ ಮತ್ತು ಒತ್ತಡ ನೀಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮೈಕ್ರೋ ಫೈನಾನ್ಸ್ ಕಂಪನಿಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಹಾಗೂ ಸಾರ್ವಜನಿಕರಿಗೆ ನೀಡಿರುವ ಸಾಲ ವಸೂಲಾತಿ ಮಾಡುವಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಕಿರುಕುಳ ಹಾಗೂ ಒತ್ತಡ ನೀಡುತ್ತಿರುವುದು ಕಂಡು ಬಂದಿದೆ. ಇದು ಅತಿರೇಕವಾದಲ್ಲಿ ಅಥವಾ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಸಾಲ ವಸೂಲತಿ ಮಾಡುವ ಮೈಕ್ರೋ ಫೈನಾನ್ಸ್ ಕಂಪನಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಮಾತ್ರವಲ್ಲದೆ ಕಿರುಕುಳ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇನ್ನೂ 2 ರಿಂದ 3 ತಿಂಗಳು ಸಾಲ ವಸೂಲಾತಿ ಮಾಡುವಂತಿಲ್ಲ. ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲ ತಾಲೂಕನ್ನು ಬರಪೀಡಿತವೆಂದು ಘೋಷಿಸಿದೆ. ಅಂತೆಯೇ ಜಿಲ್ಲೆಯ 77 ಸಾವಿರ ರೈತರಿಗೆ 34 ಕೋಟಿ ರೂ ಹಣವನ್ನು ಬರ ಪರಿಹಾರವಾಗಿ ನೀಡಿದೆ. ಬರಗಾಲ ಇರುವ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಎರಡು ಮೂರು ತಿಂಗಳು ಸಾಲ ಮರುಪಾವತಿಗೆ ಅವಕಾಶ ನೀಡಿ ಒತ್ತಡ ಹೇರದಂತೆ ನೋಡಿಕೊಳ್ಳಿ ಎಂದರು.

ಬೆಳಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿ ಸಾಲ ವಸೂಲಾತಿ ಮಾಡುವವರು ಪ್ರತಿದಿನ ಮನೆಗೆ ಭೇಟಿ ನೀಡುತ್ತಿದ್ದು, ಇದರಿಂದ ಸಾರ್ವಜನಿಕರು ತಮಗೆ ಪ್ರತಿದಿನದ ಕೆಲಸ ಮಾಡಲು ತೊಂದರೆ ಹಾಗೂ ಕಿರಿಕಿರಿ ಉಂಟಾಗುತ್ತಿದೆ ಎಂದು ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದ್ದರಿಂದ ಸಾಲ ವಸೂಲಾತಿಗೆ ಸರಿಯಾದ ಸಮಯ ನಿಗದಿ ಮಾಡಿಕೊಳ್ಳಬೇಕು. ಇನ್ನು ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೈಕ್ರೋ ಫೈನಾನ್ಸ್ ಅಧಿಕಾರಿ, ಸಿಬ್ಬಂದಿ ತೊಂದರೆ ನೀಡುತ್ತಿದ್ದಲ್ಲಿ ಸಹಾಯವಾಣಿ ಸಂಖ್ಯೆ: 18004255654, 18001021080, 01147174410 ಯನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಡಿಸಿ ಹೇಳಿದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಹಾಗೂ ವಿವಿಧ ಮೈಕ್ರೋ ಫೈನಾನ್ಸ್‌ನ ವ್ಯವಸ್ಥಾಪಕರು ಉಪಸ್ಥಿತರಿದ್ದರು.