ಮಂಡ್ಯ: ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟಗಾರರು ತಮ್ಮ ಬಳಿ ಇರುವ ದಾಸ್ತಾನುಗಳ ವಿವರ ಹಾಗೂ ದರವನ್ನು ಪ್ರತಿದಿನ ಅಂಗಡಿಯ ಮುಂಭಾಗ ಅನಾವರಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟಗಾರರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿದಿನ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಲಭ್ಯವಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ದಾಸ್ತಾನು ವಿವರದ ಬುಲೆಟಿನ್ ಅನ್ನು ರೈತರ ಮಾಹಿತಿಗಾಗಿ ಬಿಡುಗಡೆ ಮಾಡಬೇಕು. ಇದರಿಂದ ನೂಕು ನುಗ್ಗಲು ಉಂಟಾಗುವುದಿಲ್ಲ ಎಂದರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದರವನ್ನು ಕಡ್ಡಾಯವಾಗಿ ಅನಾವರಣಗೊಳಿಸಬೇಕು. ರೈತರು ಕೂಡ ಖರೀದಿಸಿದಾಗ ಅಧಿಕೃತ ಬಿಲ್ ಅನ್ನು ಪಡೆದುಕೊಳ್ಳಬೇಕು. ಅಧಿಕಾರಿಗಳು ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಗುಣಮಟ್ಟವನ್ನು ಸಹ ಪರೀಕ್ಷಿಸಬೇಕು. ರೈತರಿಗೆ ಹೆಚ್ಚು ಇಳುವರಿ ನೀಡುವಂತಹ ಹಾಗೂ ಜಿಲ್ಲೆಯ ಹವಾಮಾನಕ್ಕೆ ತಕ್ಕಂತಹ ಬಿತ್ತನೆ ಬೀಜ ಮಾರಾಟ ಮಾಡಿ. ಬೇಸಾಯ ಕ್ರಮಗಳ ಬಗ್ಗೆ ತಿಳಿಸಿ. ಹೆಚ್ಚು ಲಾಭ ಗಳಿಸುವ ಕಾರಣಕ್ಕೆ ವಿಧದ ರಸಗೊಬ್ಬರವನ್ನು ಖರೀದಿಸುವಂತೆ ರೈತರನ್ನು ಉತ್ತೇಜನೆ ಮಾಡುವುದು ಬೇಡ. ಬದಲಿಗೆ ರೈತರ ಬೇಡಿಕೆಯಂತೆ ರಸಗೊಬ್ಬರವನ್ನು ನೀಡಿ ಎಂದು ತಿಳಿಸಿದರು.
ಬಿತ್ತನೆ ಬೀಜಕ್ಕಾಗಿ ಕೆಲ ದಿನ ಅಥವಾ ವಾರ ಬೇಡಿಕೆ ಹೆಚ್ಚಿರುತ್ತದೆ. ಇಂತಹ ದಿನಗಳನ್ನು ತಿಳಿದುಕೊಂಡು ರೈತ ಸಂಪರ್ಕ ಕೇಂದ್ರಗಳು ಬೆಳಗ್ಗೆ 8 ಗಂಟೆಯಿಂದಲೇ ಕಾರ್ಯನಿರ್ವಹಿಸಬೇಕು. ರೈತರೊಂದಿಗೆ ಶಾಂತ ಚಿತ್ತ ಹಾಗೂ ಸಮನ್ವಯದಿಂದ ಕಾರ್ಯನಿರ್ವಹಿಸಿ ಕೃಷಿಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಒದಗಿಸಿ. ಇನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ತಾಲೂಕು ಮಟ್ಟದಲ್ಲಿ ರೈತ ಸಂಘಗಳೊಂದಿಗೆ ಸಭೆ ನಡೆಸಿ ಕುಂದು ಕೊರತೆಗಳನ್ನು ಪರಿಹರಿಸಿ. ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಯಾವುದೇ ಸಮಸ್ಯೆ ಇದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಪರಿಹರಿಸಿ ಎಂದರು.
ಕೃಷಿ ಇಲಾಖೆ ಪಾಂಡವಪುರ ವಿಭಾಗದ ಉಪನಿರ್ದೇಶಕಿ ಮಮತಾ ಅವರು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಬೇಡಿಕೆ, ಮಳೆ, ಬಿತ್ತನೆಯ ವಿವರನ್ನು ಸಭೆಗೆ ನೀಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪನಿರ್ದೇಶಕಿ ಮಾಲತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.