ಮಂಡ್ಯ: ಜಾನುವಾರುಗಳಿಗೆ ಹರಡುವ ಕಾಲುಬಾಯಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೆ.26ರಿಂದ ಒಂದು ತಿಂಗಳು ಲಸಿಕೆ ನೀಡಲಾಗುವುದು. ರೈತರು ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4,79,000 ಜಾನುವಾರುಗಳಿವೆ. ಲಸಿಕೆ ನೀಡಲು 401 ಜನರನ್ನು ನಿಯೋಜಿಸಲಾಗಿದೆ. ಗ್ರಾಮವಾರು ಲಸಿಕೆ ನೀಡುವ ದಿನಾಂಕದ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ರೋಗದ ಲಕ್ಷಣ ಹಾಗೂ ಸೋಂಕು ಬಂದಾಗ ಜಾನುವಾರುಗಳಿಗೆ ನೀಡುವ ಆರೈಕೆ, ಲಸಿಕೆ ನಂತರ ಯಾವುದಾದರೂ ಸಣ್ಣಪುಟ್ಟ ತೊಂದರೆಯಾದಲ್ಲಿ ಯಾರನ್ನು ಸಂಪರ್ಕಿಸಬೇಕೆನ್ನುವ ಮಾಹಿತಿಯನ್ನು ಒದಗಿಸಿ ಎಂದು ಸೂಚಿಸಿದರು.
ಮದ್ದೂರು ತಾಲೂಕು ಹೂತಗೆರೆ ಗ್ರಾಮದಲ್ಲಿ 10 ಎಕರೆ ಜಮೀನಿನಲ್ಲಿ 150 ಗೋವುಗಳನ್ನು ಸಾಕಾಣಿಕೆ ಮಾಡುವ ವ್ಯವಸ್ಥೆ ಇರುವ ಸರ್ಕಾರಿ ಗೋಶಾಲೆ ನಿರ್ವಹಣೆ ಮಾಡಲು ಎಕ್ಸ್‌ಪ್ರೆಷನ್ ಆಫ್ ಇಂಟ್ರಸ್ಟ್ ಆಹ್ವಾನಿಸಿ. ನರೇಗಾ ಯೋಜನೆಯಡಿ 10 ಎಕರೆ ಸ್ಥಳದ ಸುತ್ತ ಬಯೋಫೆನ್ಸಿಂಗ್ ಮಾಡಲು ಅವಕಾಶವಿದ್ದು, ಈ ಕುರಿತಂತೆ ಜಿಪಂ ಸಿಇಒಗೆ ಪತ್ರ ಬರೆಯಬೇಕು. ಗೋಬರ್‌ಗ್ಯಾಸ್ ಉತ್ಪಾದನೆಗಾಗಿ 50 ಲಕ್ಷ ರೂಗೆ ಯೋಜನೆ ಸಿದ್ಧಪಡಿಸಬಹುದಾಗಿದೆ. ಜಿಲ್ಲೆಯಲ್ಲಿ 8 ಗೋಶಾಲೆಗಳಿದ್ದು, ಆಸಕ್ತ ಗೋಶಾಲೆ ಅಥವಾ ಸರ್ಕಾರಿ ಗೋಶಾಲೆಯಲ್ಲಿ ಪ್ರಾರಂಭಿಸಲು ಯೋಜಿಸಿ. ಅಂತೆಯೇ ಜಿಲ್ಲೆಯಲ್ಲಿ ಅಕ್ರಮವಾಗಿ ಜಾನುವಾರುಗಳ ಸಾಗಾಣಿಕೆ ಕಂಡುಬಂದಲ್ಲಿ ಸರ್ಕಾರದ ನಿರ್ದೇಶನದಂತೆ ಕಠಿಣ ಕ್ರಮ ಕೈಗೊಳ್ಳಿ ಎಂದರು.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಸುರೇಶ್ ಮಾತನಾಡಿ, ಜಾನುವಾರುಗಳ ಸಾಗಾಟ ಮಾಡಬೇಕಾದರೆ ದಾಖಲೆ ಕಡ್ಡಾಯವಾಗಿದೆ. 15 ಕಿ.ಮೀ ಒಳಗಿನ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದೆ. 6 ತಿಂಗಳು ಗರ್ಭದ ಅವಧಿ ಮೀರಿದ ಜಾನುವಾರುಗಳ ಸಾಗಾಟ ನಿಷೇಧಿಸಿದೆ. ಆದರೆ ಚಿಕಿತ್ಸೆಗಾಗಿ ಮಾಡುವ ಸಾಗಾಟಕ್ಕೆ ವಿನಾಯಿತಿ ಇರಲಿದೆ. ಮಾತ್ರವಲ್ಲದೆ ಪ್ರಯಾಣಕ್ಕೆ ತಕ್ಕಂತೆ ಆಹಾರ ಮತ್ತು ನೀರನ್ನು ನೀಡಬೇಕು. ನಿರ್ದಿಷ್ಟಪಡಿಸಿದ ವಾಹನದಲ್ಲಿಯೇ ಕರೆದುಕೊಂಡು ಹೋಗಬೇಕು. ವಾಹನದ ವೇಗ ಪ್ರತಿ ಗಂಟೆಗೆ 25 ಕಿ.ಮೀಗಿಂತ ಹೆಚ್ಚಿರಬಾರದು. ರಾತ್ರಿ 8ರಿಂದ ಬೆಳಗ್ಗೆ 6ರ ಅವಧಿಯಲ್ಲಿ ಸಾಗಾಟ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ 50 ಸಾವಿರ ರೂನಿಂದ 5 ಲಕ್ಷ ರೂವರೆಗೆ ದಂಡ ಜತೆಗೆ 3 ರಿಂದ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕರಾದ ಡಾ.ರಮೇಶ್‌ರಾಜ್, ಡಾ.ಪ್ರವೀಣ್, ಉಪಪರಿಸರ ಅಧಿಕಾರಿ ಬಿ.ಕೆ.ಅಶ್ವಿನಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಆರ್‌ಟಿಒ ಅಧಿಕಾರಿ ಹೇಮಾವತಿ ಇತರರಿದ್ದರು.