ಜಿಲ್ಲೆ

ಹೈಕೋರ್ಟ್ ಆದೇಶದ ಎಫೆಕ್ಟ್: ಕೆಆರ್‌ಎಸ್ ಡ್ಯಾಂ ಸುತ್ತ ಗಣಿಗಾರಿಕೆ ನಿಷೇಧಿಸಿದ ಜಿಲ್ಲಾಡಳಿತ

ಕೆ.ಎನ್.ರಾಘವೇಂದ್ರ

ಮಂಡ್ಯ: ಹೈಕೋರ್ಟ್ ಆದೇಶದಂತೆ ಕೃಷ್ಣರಾಜಸಾಗರ ಅಣೆಕಟ್ಟಿನ ಸುತ್ತಮುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಡ್ಯಾಂನಿಂದ 20 ಕಿ.ಮೀ ವ್ಯಾಪ್ತಿಯ 30 ಕ್ವಾರೆಗಳನ್ನು 2022ನೇ ಸಾಲಿನಲ್ಲಿ ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಪರವಾನಗಿ ಹೊಂದಿರುವ ಕ್ವಾರೆ ಹಾಗೂ ಕ್ರಷರ್‌ಗಳಿಗೆ ಪತ್ರ ಬರೆದು ನಿಲುಗಡೆ ಮಾಡಲು ತಿಳಿಸಬೇಕು ಎಂದರು.

ಡ್ಯಾಂನಿಂದ 20 ಕಿ.ಮೀ ವ್ಯಾಪ್ತಿಗೆ ಶ್ರೀರಂಗಪಟ್ಟಣ, ಪಾಂಡವಪುರ ಹಾಗೂ ಕೆ.ಆರ್.ಪೇಟೆ ತಾಲೂಕು ಸೇರಲಿದೆ. ಈ ತಾಲೂಕಿನ ತಹಸೀಲ್ದಾರ್‌ಗಳು ಯಾವುದೇ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಬೇಕು. ಅನಧಿಕೃತವಾಗಿ ನಡೆಯುತ್ತಿರುವ ಬಗ್ಗೆಯೂ ಅಧಿಕಾರಿಗಳ ಹೆಚ್ಚಿನ ಪರಿಶೀಲನೆಗಳನ್ನು ನಡೆಸಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಭೂ ವಿಜ್ಞಾನಿ ರೇಷ್ಮಾ, ಡಿಎಫ್‌ಒ ರಾಜು ಇತರರಿದ್ದರು.