ಜಿಲ್ಲೆ

ತಿಂಗಳಲ್ಲಿ ಕೆರೆ ಸರ್ವೇ ಪೂರ್ಣಗೊಳಿಸಿ, ನಿರ್ಲಕ್ಷ್ಯಿಸಿದರೆ ಶಿಸ್ತು ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರೆವುಗೊಳಿಸುವುದರ ಜತೆಗೆ ಪುನರುಜ್ಜೀವನಗೊಳಿಸಲು ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಬಗ್ಗೆ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು. ಕೆರೆಗಳ ಸಮಗ್ರ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಸಂಬಂಧಪಟ್ಟ ಸಮನ್ವಯತೆ ಸಾಧಿಸಬೇಕು. ಈ ಮೂಲಕ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

ಜಿಲ್ಲೆಯಲ್ಲಿ ಒಟ್ಟು 962 ಕೆರೆಗಳಿವೆ. ಈ ಪೈಕಿ ಜಿಲ್ಲಾ ಪಂಚಾಯಿತಿ, ಕಾವೇರಿ ನೀರಾವರಿ ನಿಗಮ ವಿ.ಸಿ ವಿಭಾಗ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಹೇಮಾವತಿ ನಾಲಾ ಇಲಾಖೆಯ ವ್ಯಾಪ್ತಿಯ ಕೆರೆಗಳು ಒತ್ತುವರಿ ಆಗಿದ್ದರೆ ಅಂತಹವನ್ನು ತೆರವುಗೊಳಿಸಬೇಕು. ಸರ್ವೇಯಿಂದ ಬಾಕಿ ಉಳಿದಿರುವ ಕರೆಯನ್ನು ಸರ್ವೇ ಮಾಡಲಿಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದ್ದು, ಅಷ್ಟರಲ್ಲಿ ಪೂರ್ಣಗೊಳಿಸಬೇಕು. ಎಲ್ಲೆಲ್ಲಿ ಕೆರೆ ಒತ್ತುವರಿ ಮಾಡಲಾಗಿದೆ ಅಲ್ಲಿ ಸರ್ವೆ ಮಾಡಿ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ವಹಿಸಿದ್ದು ಕಂಡುಬಂದರೆ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ತೀವ್ರ ನೀರಿನ ಕೊರತೆ ನೀಗಿಸಲು ಹಾಗೂ ಸಸ್ಯ, ಪ್ರಾಣಿ ಸಂಪತ್ತಿಗೆ ಕುಡಿಯುವುದಕ್ಕೆ ನೀರು ಮತ್ತು ಜಾನುವಾರುಗಳ ಬಳಕೆಗೆ ನೀರಿನ ಲಭ್ಯತೆಗಾಗಿ ಜಲಮೂಲವಾದ ಕೆರೆಗಳ ಸಂರಕ್ಷಣೆ ಮತ್ತು ಪುನಶ್ಚೇತನಗೊಳಿಸುವುದು ಅಗತ್ಯ. ಕೆರೆಗಳ ಅಳತೆ ಪ್ರಕ್ರಿಯೆಗೆ ಒಂದು ತಿಂಗಳು ಗಡವು ನೀಡಿದ್ದು, ಅಷ್ಟರೊಳಗೆ ಅಳತೆ ಪ್ರಕ್ರಿಯೆ ಪೂರ್ಣಗೊಳಿಸಿ. ಜಿಲ್ಲೆಯಲ್ಲಿರುವ 962 ಕೆರೆಗಳಿಗೂ ಇಲಾಖೆ ಹಾಗೂ ತಾಲೂಕುವಾರು ಪ್ರತ್ಯೇಕ ಕಡತ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಧನುಷ್, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಇತರರಿದ್ದರು.