ಜಿಲ್ಲೆ

ಹಸಿರು ಪಟಾಕಿಯಷ್ಟೇ ಮಾರಾಟ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯ: ದೀಪಾವಳಿ ಹಬ್ಬದ ಅಂಗವಾಗಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಮಾರಾಟಗಾರರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅ.18ರಿಂದ 23 ರವರೆಗೆ ಮಾತ್ರ ಪಟಾಕಿ ಮಾರಾಟಗಾರರಿಗೆ ತಾತ್ಕಾಲಿಕ ಪರವಾನಗಿ ನೀಡಲಾಗುವುದು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ ಮಾಡಲಿದೆ. ಆ ಸ್ಥಳದಲ್ಲಿ ಮಾತ್ರ ಪಟಾಕಿ ಅಂಗಡಿಗಳನ್ನು ತೆರೆಯಬೇಕು ಎಂದು ಹೇಳಿದರು.

ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು. ತಹಸೀಲ್ದಾರ್ ನೇತೃತ್ವದ ಸಮಿತಿಯು ಆಯಾ ತಾಲೂಕು ಮಟ್ಟದಲ್ಲಿ ಪಟಾಕಿ ಮಾರಾಟಗಾರರಿಗೆ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಸಂದರ್ಭದಲ್ಲಿ ಸೂಕ್ತ ಜಾಗವನ್ನು ಗುರುತಿಸಿ ಅನುಮತಿ ನೀಡಬೇಕು. ಸುತ್ತ ಮುತ್ತಲು ದೇವಸ್ಥಾನ, ಆಸ್ಪತ್ರೆ, ಮನೆಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳಿ ಎಂದು ಎಚ್ಚರಿಸಿದರು.

ಪಟಾಕಿ ಮಾರಾಟ ಮಾಡಲು ತಾತ್ಕಾಲಿಕವಾಗಿ ಪರವಾನಿಗೆ ನೀಡುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕೃತವಾಗುವ ಅರ್ಜಿಯನ್ನು ಆಯಾ ತಾಲೂಕು ಕಚೇರಿಗಳಿಗೆ ಕಳುಹಿಸಲಾಗುವುದು. ಪಟಾಕಿ ಮಾರಾಟ ಮಾಡಲು ನಿಗದಿಪಡಿಸುವ ಜಾಗವೂ ಸರ್ಕಾರಿ ಒಡೆತನಕ್ಕೆ ಸೇರಿದ್ದರೆ ಸಂಬಂಧಪಟ್ಟ ಇಲಾಖೆಯ ಬಳಿ ಎನ್‌ಒಸಿ ಪಡೆಯಬೇಕು. ಖಾಸಗಿ ಜಾಗ ಆಗಿದ್ದರೆ ಸಂಬಂಧಿಸಿದ ಮಾಲೀಕರ ಬಳಿ ಎನ್‌ಒಸಿ ಪಡೆಯಬೇಕು. ಪಟಾಕಿ ಮಳಿಗೆಗಳನ್ನು ತೆರೆಯಲು ಲೇಔಟ್ ಸಿದ್ಧಪಡಿಸಿ. ಒಂದು ಮಳಿಗೆಯಿಂದ ಇನ್ನೊಂದು ಮಳಿಗೆ 10*10 ಅಡಿ ದೂರ ಇರಬೇಕು. ಪ್ರತಿ ಮಳಿಗೆ 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೇಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‌ನಲ್ಲಿ ನೀರು ಮತ್ತು ಮರಳನ್ನು ಇಟ್ಟಿರಬೇಕು. ಪ್ರತಿ ಮಳಿಗೆ ಪಕ್ಕದಲ್ಲಿ 2 ಡ್ರಂಗಳ ಕನಿಷ್ಟ 1000 ಲೀಟರ್ ನೀರನ್ನು ಕಡ್ಡಾಯವಾಗಿ ಶೇಖರಿಸಿಡಬೇಕು. ವಾಹನಗಳನ್ನು ಪಾರ್ಕಿಂಗ್ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

ಮಳಿಗೆಗಳಿಂದ ಕನಿಷ್ಟ 50 ಮೀಟರ್ ದೂರದವರೆಗೂ ಧೂಮಪಾನ, ಅಡುಗೆ ವ್ಯವಸ್ಥೆ, ಕಿಡಿಹೊತ್ತಿಸುವುದು, ಪಟಾಕಿ ಸಿಡಿಸುವುದನ್ನು ನಿಷೇಧ ಎಂಬ ಸೂಚನಾ ಫಲಕ ಅಳವಡಿಸಬೇಕು. ಆ ಪ್ರದೇಶದಲ್ಲಿ ತಿಳಿಸಲಾದ ಯಾವುದೇ ವ್ಯಕ್ತಿ ನಿಯಮ ಉಲ್ಲಂಘಿಸಿದರೆ ನಿಯಮಾನುಸಾರ ಕ್ರಮ ಜಾರಿಗೊಳಿಸಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಪಟಾಕಿ ಅಂಗಡಿಗಳು ಮುಚ್ಚುವವರೆಗೆ ಫೈಯರ್ ಇಂಜಿನ್ ಅನ್ನು ಇರಿಸಲಾಗುವುದು. ಖರೀದಿ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಸೂಕ್ತ ಕ್ರಮ ವಹಿಸಬೇಕು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯು ಕಾಲ ಕಾಲಕ್ಕೆ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಅಗ್ನಿ ಅವಘಡಗಳನ್ನು ತಪ್ಪಿಸಲು ಪಟಾಕಿ ಮಾರಾಟಗಾರರಿಗೆ ಅಗ್ನಿಶಾಮಕ ಇಲಾಖೆಯ ವತಿಯಿಂದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತರಬೇತಿ ನೀಡಬೇಕು ಎಂದು ಸೂಚಿಸಿದರು.

ಪಟಾಕಿ ಮಾರಾಟಗಾರರು ಅಂಗಡಿಯನ್ನು ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ರಾತ್ರಿ 9 ಗಂಟೆಯ ನಂತರ ಮಳಿಗೆ ಮುಚ್ಚಬೇಕು. ಯಾರು ಸಹ ಮಳಿಗೆಗಳಲ್ಲಿ ಉಳಿದುಕೊಳ್ಳುವಂತಿಲ್ಲ. ಬಾಲ ಕಾರ್ಮಿಕರನ್ನು ಪಟಾಕಿ ಮಾರಾಟದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ಗಂಟೆಯ ನಂತರ ಸಾರ್ವಜನಿಕರು ಪಟಾಕಿ ಹೊಡೆಯುವಂತಿಲ್ಲ. ಈ ಬಗ್ಗೆ ದೂರು ಬಂದಲ್ಲಿ ಕ್ರಮ ಜರುಗಿಸಲಾಗುವುದು. ಮಾರಾಟಗಾರರು ಅಂಗಡಿ ಅವರು ಪರವಾನಗಿ ಪಡೆಯಲು ಅ.4 ರೊಳಗಾಗಿ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ತಾತ್ಕಾಲಿಕ ಪರವಾನಿಗೆ ಪಡೆದ ಪಟಾಕಿ ಮಾಲೀಕರು ನೇರವಾಗಿ ಗ್ರಾಹಕರಿಗೆ ಪಟಾಕಿಗಳನ್ನು ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ಅಂಗಡಿಗಳಿಗೆ ಪಟಾಕಿಗಳನ್ನು ರಫ್ತು ಮಾಡಬಾರದು. ಡಿವೈಎಸ್‌ಪಿಗಳು ತಮ್ಮ ವ್ಯಾಪ್ತಿಗೆ ಬರುವ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಾರಾಟಗಾರರು ಪಟಾಕಿಗಳನ್ನು ಅವರ ಮನೆಗಳಲ್ಲಿ ಶೇಖರಿಸಿರಬಾರದು. ಮಾರಾಟ ಮಾಡಲು ಬರುವ ಪಟಾಕಿಗಳನ್ನು ಬಿಡಿಯಾಗಿ ಮಾರಾಟ ಮಾಡುವುದು ಗಿಫ್ಟ್ ಪ್ಯಾಕ್ ಹೆಸರಿನಲ್ಲಿ ಬಿಡಿ ಮಾರಾಟ ಮಾಡುವಂತಿಲ್ಲ. ಮಾರಾಟ ಅವಧಿ ಮುಗಿದ ನಂತರ ಉಳಿದ ಪಟಾಕಿಗಳನ್ನು ಹಿಂದಿರುಗಿಸಿರುವ ಬಗ್ಗೆ ವರದಿ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ಪಾಂಡವಪುರ ತಹಸೀಲ್ದಾರ್ ಸಂತೋಷ್, ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ್, ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗೀತಾ ಸೇರಿದಂತೆ ಪಟಾಕಿ ಮಾರಾಟದಾರರು ಉಪಸ್ಥಿತರಿದ್ದರು.