ಮಂಡ್ಯ: ಜಿಲ್ಲೆಯಲ್ಲಿ ನಗರ ಅನಿಲ ವಿತರಣಾ ಜಾಲದ ಯೋಜನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂಪ್ರೆಸ್ಡ್ ನೈಸರ್ಗಿಕ ಅನಿಲವನ್ನು ಕೊಳವೆಯ ಮೂಲಕ ಗೃಹ ಬಳಕೆ, ವಾಣಿಜ್ಯ, ಕೈಗಾರಿಕಾ ಗ್ರಾಹಕರಿಗೆ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಕಂಪ್ರೆಸ್ಡ್ ನೈಸರ್ಗಿಕ ಅನಿಲದ ಫೈಪ್‌ಲೈನ್ ಕೆಲಸವನ್ನು ಪ್ರಾರಂಭಿಸಲು ಬೇಕಿರುವ ಸ್ಥಳ, ಅಳವಡಿಕೆ ಬಳಿಕ ರಸ್ತೆ ಸರಿಪಡಿಸುವುದು ಸೇರಿದಂತೆ ಇತರೆ ಕೆಲಸಗಳ ಬಗ್ಗೆ ನೋಡಿಕೊಳ್ಳಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾ ಮಣಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದರೆ ಪೈಪ್‌ಲೈನ್ ಸಂಪರ್ಕ ಪಡೆಯುವುದು ಮನೆ ಮಾಲೀಕರ ಐಚ್ಛಿಕ ವಿಷಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಯೋಜನೆ ಅನುಷ್ಠಾನ ಮಾಡುತ್ತಿರುವ ಸಂಸ್ಥೆಯ ಮುಖ್ಯ ಇಂಜಿನಿಯರ್ ಚರಣ್ ಮಾತನಾಡಿ, ಜಿಲ್ಲೆಯ ನಗರ ಹಾಗೂ ಪಟ್ಟಣ ವ್ಯಾಪ್ತಿಯ ಮನೆ ಮನೆಗೆ ಭೇಟಿ ಮಾಡಿ ಸಿಎನ್‌ಜಿ ಫೈಪ್‌ಲೈನ್ ಅಳವಡಿಕೆಯ ಅನುಕೂಲತೆಯ ಬಗ್ಗೆ ತಿಳಿಸಲಾಗುವುದು. ಮಾತ್ರವಲ್ಲದೆ ಎಲ್ಪಿಜಿ ಹಾಗೂ ಸಿಎನ್‌ಜಿ ನಡುವಿನ ಇರುವ ವ್ಯತ್ಯಾಸವನ್ನು ಸಹ ತಿಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿರುವ 13,54,715 ವಸತಿ ಯೋಜನೆಯಡಿ ಗುರುತಿಸಲಾಗಿದೆ. ಇದಲ್ಲದೇ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳನ್ನು ಸಂಪರ್ಕಿಸಿ ಸಿಎನ್‌ಜಿ ಒದಗಿಸುವ ಬಗ್ಗೆ ವಿವರಿಸಲಾಗಿದೆ. ಜಿಲ್ಲೆಯಲ್ಲಿ 4 ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳಿಗೆ ಸಿಎನ್‌ಜಿ ಇಂಧನ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಸಿಂಧೆ, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಗುರುರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎನ್.ವಿ.ತುಷಾರಾಮಣಿ, ಪೌರಾಯುಕ್ತ ಆರ್.ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಇತರರಿದ್ದರು.