ಜಿಲ್ಲೆ

ಮಾ.21ರಂದು ವೈರಮುಡಿ ಬ್ರಹ್ಮೋತ್ಸವ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಮಾ.21ರಂದು ವೈರಮುಡಿ ಉತ್ಸವ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾ ಖಜಾನೆಯಿಂದ ವೈರಮುಡಿಯ ವಜ್ರಾಭರಣವಿರುವ ಪೆಟ್ಟಿಗೆಯನ್ನು ಮಾ.21ರಂದು ಬೆಳಗ್ಗೆ 7 ಗಂಟೆಗೆ ಪಡೆದು ಮೇಲುಕೋಟೆಗೆ ತೆಗೆದುಕೊಂಡು ಹೋಗಲಾಗುವುದು. ಈ ಸಮಯದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆಯಾಗಬೇಕು. ವೈರಮುಡಿ ಬ್ರಹ್ಮೋತ್ಸವವು ಅಂದು ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ ಎಂದರು.

ಕುಡಿಯುವ ನೀರಿನ ವ್ಯವಸ್ಥೆ: ಬ್ರಹ್ಮೋತ್ಸವಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಆಗಬೇಕು. ಹಾಲಿ ಇರುವ ನೀರಿನ ಟ್ಯಾಂಕರ್ ಹಾಗೂ ತೊಂಬೆಗಳನ್ನು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದರು.

ದೊಡ್ಡ ಕಲ್ಯಾಣಿ ಬಳಿ ಬಟ್ಟೆ ಬದಲಾಯಿಸಲು ತಾತ್ಕಾಲಿಕ ಶೆಡ್‌ಗಳು ನಿರ್ಮಾಣವಾಗಬೇಕು. ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ನುರಿತ ಈಜುಗಾರರನ್ನು ಕಲ್ಯಾಣಿಗಳ ಬಳಿ ನಿಯೋಜಿಸಬೇಕು. ತುರ್ತು ಆರೋಗ್ಯ ಸೇವೆ ಒದಗಿಸಲು ಆಂಬುಲೆನ್ಸ್ ಹಾಗೂ ಆರೋಗ್ಯ ಸಿಬ್ಬಂದಿ ಇರಬೇಕು. ಮೇಲುಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ದುರಸ್ತಿಗೊಳಿಸುವುದರ ಜತೆಗೆ ಕೆಎಸ್‌ಆರ್‌ಟಿಸಿಯಿಂದ ಮೇಲುಕೋಟೆಗೆ ವಿವಿಧ ಭಾಗಗಳಿಂದ ಹೆಚ್ಚು ಬಸ್ ಕಲ್ಪಿಸಬೇಕು. ಇದರೊಂದಿಗೆ ವಾಹನ ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನದವರೆಗೆ 10 ಉಚಿತ ಬಸ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ವೈರಮುಡಿ ಬ್ರಹ್ಮೋತ್ಸವವು ಮಾ.16 ರಿಂದ 26 ರವರೆಗೆ ನಡೆಯಲಿದ್ದು, ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಸ್ವಾಗತ, ಆಹಾರ, ಆರೋಗ್ಯ, ಸ್ವಚ್ಛತೆ ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಲೋಪ ಉಂಟಾಗದಂತೆ ಕೆಲಸ ನಿರ್ವಹಿಸಬೇಕು ಎಂದರು.

ವೈರಮುಡಿ ಪ್ರಾರಂಭದಿಂದ ಮುಕ್ತಾಯದವರೆಗೆ ಕ್ಷೇತ್ರಕ್ಕೆ ನಿರಂತರ ವಿದ್ಯುತ್ ಸರಬರಾಜು ಆಗಬೇಕು. ಕಲ್ಯಾಣಿ, ಪಾರ್ಕಿಂಗ್ ಸ್ಥಳಗಳಲ್ಲಿ ಹೆಚ್ಚಿನ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಬೇಕು. ಅವಘಡಗಳು ಉಂಟಾಗದಂತೆ ಎಚ್ಚರಿಕೆ ವಹಿಸುವುದರ ಜತೆಗೆ ಚೆಲುವನಾರಾಯಣಸ್ವಾಮಿ ಹಾಗೂ ಯೋಗನರಸಿಂಹ ಸ್ವಾಮಿ ದೇವಾಲಯ, ಪ್ರಮುಖ ಮಂಟಪ, ಕಲ್ಯಾಣಿಗಳಿಗೆ ವಿಶೇಷ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿವಿಧಡೆಯಿಂದ ಬರುವ ಭಕ್ತರು ರಸ್ತೆಗಳಲ್ಲಿ ಕುಳಿತು ಬ್ರಹ್ಮೋತ್ಸವ ವೀಕ್ಷಿಸುತ್ತಾರೆ. ಆದ್ದರಿಂದ ಮೂಲ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು. ವೈರಮುಡಿ ಉತ್ಸವ ಮುಗಿದ ನಂತರವೂ ಸ್ವಚ್ಛತೆಗೆ ಆದ್ಯತೆ ಸಿಗಬೇಕು. ದಸೋಹ ಭವನದಲ್ಲಿ ಭಕ್ತರಿಗೆ ನಿತ್ಯ ಊಟದ ವ್ಯವಸ್ಥೆ ಮಾಡಲು ಯೋಜನೆ ರೂಪಿಸಬೇಕು ಎಂದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕೆ ಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಪಾಂಡವಪುರ ವಿಭಾಗಾಧಿಕಾರಿ ನಂದೀಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಆರೋಗ್ಯ ಇಲಾಖೆಯ ಡಾ.ಸೋಮಶೇಖರ್, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮೋಹನ್‌ಕುಮಾರ್ ಇತರರಿದ್ದರು.