ಮಂಡ್ಯ: ಹೇಮಾವತಿ ನಾಲೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ 25 ವರ್ಷವಾದರೂ ಪರಿಹಾರ ನೀಡದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೇಮಾವತಿ ನೀರು ಬಳಕೆದಾರರ ಸಂಘ, ಪಾಂಡವಪುರ ಉಪವಿಭಾಗಾಧಿಕಾರಿ, ವಿಶೇಷ ಭೂಸ್ವಾಧಿನಾಧಿಕಾರಿ, ಕಾವೇರಿ ನೀರಾವರಿ ನಿಗಮ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರ ಒಪ್ಪಿಗೆ ಪಡೆಯದೆ ಕಾಲುವೆ ನಿರ್ಮಿಸಿದ್ದಲ್ಲದೆ, ಇಷ್ಟು ವರ್ಷವಾದರೂ ಅವರಿಗೆ ಪರಿಹಾರ ನೀಡದೆ ವಿಳಂಬ ಏಕೆ ಮಾಡುತ್ತಿದ್ದೀರಿ. ಯಾವ್ಯಾವ ಗ್ರಾಮದ ಎಷ್ಟೆಷ್ಟು ರೈತರ ಜಮೀನು ನಾಲೆಗೆ ಹೋಗಿದೆ ಎಂಬ ಮಾಹಿತಿಯು ಇಲ್ಲ. ಹೀಗಾದರೆ ಹೇಗೆ?. 11ಇ ಸ್ಕೆಚ್‌ಗೆ ಹಣವನ್ನು ರೈತರು ಏಕೆ ಕಟ್ಟಬೇಕು. ನಿಮಗೆ ತಾನೆ ಭೂಮಿ ಬೇಕಿರುವುದು ನೀವೇ ಹಣ ಕಟ್ಟಿ ಎಂದು ಅಧಿಕಾರಿಗಳ ಬೆವರಿಳಿಸಿದರು. ಮಾತ್ರವಲ್ಲದೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, 11ಇ ಸ್ಕೆಚ್‌ಗೆ ಹಣ ನೀಡುವಂತೆ ಕೋರಿ, ಅದಕ್ಕೆ ಸಮ್ಮತಿ ಪಡೆದುಕೊಂಡರು. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ, ಬೆಳ್ಳೂರು, ಕಸಬಾ ಮತ್ತು ದೇವಲಾಪುರ ಹೋಬಳಿ 42 ಗ್ರಾಮದ 545 ಸರ್ವೆ ನಂಬರ್‌ಗೆ ಅಂದಾಜು 5 ಲಕ್ಷ ರೂಗಳನ್ನು ಸರ್ವೇ ಇಲಾಖೆಗೆ ಕಟ್ಟಿಸಿ ಎಂದು ಸೂಚನೆ ನೀಡಿದರು.
ಹೇಮಾವತಿ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಮತ್ತು ಹಲವು ರೈತರು ಸಾಕಷ್ಟು ಸಲ ಭೂ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಆದರೆ ನಾಲೆ ತೆಗೆದು ಸುಮ್ಮನೆ ಕುಳಿತರೆ ಹೇಗೆಂದು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿ, 11ಇ ಸ್ಕೆಚ್ ಮಾಡುವಾಗ ಆರ್‌ಟಿಸಿ ಮತ್ತು ಭೂಮಿಗೂ ತಾಳೆ ಬರದಿದ್ದರೆ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಬಹುಬೇಗ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್‌ಗೆ ಸೂಚಿಸಿದರು. ಅಂತೆಯೇ ಭೂಸ್ವಾಧೀನ ಇಲಾಖೆಯಲ್ಲಿ ಏಕೈಕ ನೌಕರನಿದ್ದು, ಮೇಲಧಿಕಾರಿಗೆ ಬರೆದು ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಮತ್ತು ನೌಕರ ನೇಮಕ ಮಾಡಿಕೊಳ್ಳುವಂತೆ ವಿಶೇಷ ಭೂಸ್ವಾಧಿನಾಧಿಕಾರಿ ವಿಶ್ವನಾಥ್‌ಗೆ ತಿಳಿಸಿದರು.
ನಾಗಮಂಗಲ ತಾಲೂಕು ಮೈಲಾರಪಟ್ಟಣದ ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ.ಸಿ.ಮೋಹನ್‌ಕುಮಾರ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ಇಷ್ಟು ವರ್ಷವಾದರೂ ರೈತರಿಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡುತ್ತಾರೆ. ಪ್ರತಿ ವರ್ಷ ಇದೇ ಆಗುತ್ತಿದೆ. ಈಗ 11ಇ ಸ್ಕೆಚ್‌ಗೆ ಆದೇಶ ಆಗಿರುವ ರೈತರಿಗೆ ಶೀಘ್ರಗತಿಯಲ್ಲಿ ಸ್ಕೆಚ್ ಮಾಡಿಸಿ ಪರಿಹಾರ ಕೊಡಿಸಿ ಎಂದು ಮನವಿ ಮಾಡಿದರು.
ಡಿಸಿ ಪ್ರತಿಕ್ರಿಯಿಸಿ, ಪ್ರತಿ 15 ದಿನಕ್ಕೊಮ್ಮೆ ತಮ್ಮ ನೇತೃತ್ವದಲ್ಲಿ ವಿಶೇಷ ಭೂಸ್ವಾಧಿನಾಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ, ನಾಗಮಂಗಲ ತಹಸೀಲ್ದಾರ್ ಮತ್ತು ನಾಗಮಂಗಲದ ಭೂದಾಖಲೆಗಳ ಸಹಾಯಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಭೆ ಸೇರಿ ಚರ್ಚಿಸಿ ಭೂಸ್ವಾಧೀನದ ಪ್ರಗತಿ ಪರಿಶೀಲನೆ ನಡೆಸುತ್ತೇನೆ ಎಂದರು.
ನೀರು ಬಿಡಲು ಡಿಸಿಗೆ ಮನವಿ: ಅರೆ ಖುಷ್ಕಿ ಬೆಳೆಗಳಾದ ರಾಗಿ, ಅವರೆ, ತರಣಿ ಬೆಳೆಗಳು ಮಳೆಯಿಲ್ಲದೆ ಒಣಗುವ ಸ್ಥಿತಿ ಉಂಟಾಗಿದೆ. ಜತೆಗೆ ಕೆರೆ ಕಟ್ಟೆಗಳು ಬರಿದಾಗುತ್ತಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ತಲೆದೋರಿದೆ. ನಾಗಮಂಗಲ ಶಾಖಾ ಕಾಲುವೆಯ ವಿತರಣಾ ನಾಲೆಗಳಾದ 17, 18 ಮತ್ತು 19ರಲ್ಲಿ ಕೇವಲ 4-5 ದಿನ ನೀರು ಹರಿಸಿದ್ದು, ಮತ್ತೆ ನೀರು ಬಿಟ್ಟಿಲ್ಲ. ಹೀಗಾಗಿ ಹೇಮಾವತಿ ನಾಲೆಗಳಿಗೆ ನೀರು ಬಿಡುವಂತೆ ರೈತರು ಮತ್ತು ಹೇಮಾವತಿ ನೀರು ಬಳಕೆದಾರರ ಸಂಘ ಜಿಲ್ಲಾಧಿಕಾರಿಗೆ ಮನವಿ ಮಾಡಿತು.
ಹೇಮಾವತಿ ಎಡದಂಡೆ ನಾಲೆ ನಾಗಮಂಗಲದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಿ.ಎನ್.ಶಿಲ್ಪಾ, ಎಇಇ ಭಾಸ್ಕರ್, ನಾಗಮಂಗಲ ಶಾಖಾ ಕಾಲುವೆ ಯಡಿಯೂರು ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಟಿ.ಶ್ರೀನಿವಾಸ್, ಎಇಇಗಳಾದ ಜೆ.ಬಿ.ರುದ್ರೇಶ್, ಸುಧಾಜೈನ್, ರಾಜೇಗೌಡ, ಎಇಗಳಾದ ರಾಜು, ನವೀನ್, ಭೂಸ್ವಾಧೀನ ಇಲಾಖೆಯ ಪಾರ್ವತಿ, ಹೇಮಾವತಿ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ನರಸಿಂಹೇಗೌಡ, ಖಜಾಂಚಿ ಎಚ್.ಎಂ.ವೆಂಕಟೇಶ್, ನಿರ್ದೇಶಕರಾದ ರಾಜಣ್ಣ, ಬೋರೇಗೌಡ, ಎಚ್.ಎಂ.ನಾಗೇಶ್ ಇತರರಿದ್ದರು.