ಜಿಲ್ಲೆ

ಮಾದಕ ವಸ್ತುಗಳ ಸೇವನೆ ದುಷ್ಟರಿಣಾಮ ಮೂಡಿಸುವುದು ಅಗತ್ಯ

ಗೋಪಾಲಕೃಷ್ಣ ಪಾದೂರ್

ಉಡುಪಿ: ಯುವಜನತೆಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್​.ಸಿ.ಓ.ಆರ್​.ಡಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಕೋಟ್ಪಾ-2003 ಕಾಯಿದೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವಜನತೆ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾದಕ ವಸ್ತುಗಳಿಗೆ ಮಾರು ಹೋಗಿ ತಮ್ಮ ಶಿಕ್ಷಣದಿಂದ ವಂಚಿತರಾಗುತ್ತಾರೆ. ಅರೋಗ್ಯ ಜೊತೆಗೆ ಭವಿಷ್ಯದ ಜೀವನವು ಹಾಳಾಗುತ್ತದೆ. ಶಾಲಾ-ಕಾಲೇಜುಗಳ ಆವರಣದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಸಹ ಆ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಿಗೆಯನ್ನು ರದ್ದು ಮಾಡಲು ಸ್ಥಳಿಯ ಸಂಸ್ಥೆಗಳಿಗೆ ಕೂಡಲೇ ಶಿಫಾರಸು ಮಾಡಿ, ಅಂಗಡಿಗಳನ್ನು ಬಂದ್​ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದ ಸಂದರ್ಭದಲ್ಲಿ ಮಾದಕ ವಸ್ತುಗಳಿಂದ ದೂರ ವಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ತಿಳಿಹೇಳಬೇಕು. ವಿದ್ಯಾರ್ಥಿಗಳಿಗೆ ಈ ಬಗ್ಗೆ ಪ್ರತಿಜ್ಞಾವಿಧಿಗಳನ್ನು ಪ್ರತಿ ತಿಂಗಳಿಗೊಮ್ಮೆ ಬೋಧಿಸಬೇಕು. ಅರಣ್ಯದ ಅಂಚಿನಲ್ಲಿ ಕೆಲವು ತೋಟಗಳಲ್ಲಿ, ಕೃಷಿ ಭೂಮಿಗಳಲ್ಲಿ ಅಥವಾ ಕಟ್ಟಡದ ಮೇಲ್ಛಾವಣಿಯ ಮೇಲೆ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಿಗಾವಹಿಸಿ, ಅನಿರೀಕ್ಷಿತ ಭೇಟಿಗಳನ್ನು ಅಂತಹ ಅನುಮಾನದ ಸ್ಥಳಗಳ ವೀಕ್ಷಣೆ ಮಾಡಬೇಕು. ಈ ಬಗ್ಗೆ ವರದಿಗಳನ್ನು ನೀಡಬೇಕು ಎಂದು ಸೂಚನೆ ನೀಡಿದರು.

ಮಾದಕ ದ್ರವ್ಯ ವಸ್ತುಗಳು ಮೆಡಿಸಿನ್​ ಹಾಗೂ ಚಿಕ್ಕ ಪಾರ್ಸೆಲ್​ನಲ್ಲಿ ಅಂಚೆ ಮೂಲಕ ಸಾಗಾಟವಾಗುತ್ತಿದ್ದು, ಅಂಚೆ ಇಲಾಖೆಯವರು ಈ ಬಗ್ಗೆ ಅನುಮಾನ ಬಂದಂತಹ ಪಾರ್ಸೆಲ್​ಗಳನ್ನು ವಾರಸುದಾರರ ಸಮ್ಮುಖದಲ್ಲಿ ತೆರೆದು ನೋಡಿ, ವಾರಸುದಾರರಿಗೆ ಹಸ್ತಾಂತರಿಸುವುದು ಸೂಕ್ತ. ಜಿಲ್ಲೆಯ ಎಲ್ಲಾ ಮೆಡಿಕಲ್​ ಸ್ಟೋರ್​ಗಳಲ್ಲಿ ಸಿ.ಸಿ.ಟಿ.ವಿ ಆಳವಡಿಸುವುದು ಕಡ್ಡಾಯ ಎಂದು ಸೂಚನೆ ನೀಡಿದರು.

ಯುವಜನರು ಮಾದಕ ವ್ಯಸನದ ಪರೀಕ್ಷೆ ಮಾಡಿದ ಸಂದರ್ಭದಲ್ಲಿ 97 ಜನರು ಮಾದಕ ವ್ಯಸನ ಮಾಡಿರುವುದು ಕಂಡುಬಂದಿದೆ, ಇವರಲ್ಲಿ 90 ಜನರು ಮಣಿಪಾಲ ಭಾಗದವರೆ ಆಗಿದ್ದಾರೆ ಉಳಿದ 7 ಜನರು ಇತರೆ ಭಾಗದವರಾಗಿದ್ದು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು ಇಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಲ್ಲಿ ಅವರನ್ನು ಶಿಕ್ಷಣ ಸಂಸ್ಥೆಯಿಂದ ಹೊರಗಿಡುವುದು ಸೂಕ್ತ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಅರುಣ್​ ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಢಾದ್​, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಸರ್ಜನ್​ ಡಾ. ಅಶೋಕ್​, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಜಿ.ಶಂಕರ್​ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್​ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.