ಜಿಲ್ಲೆ

ತುಂತುರು, ಹನಿ ನೀರಾವರಿ ಯೋಜನೆಗೆ ಸಹಾಯಧನ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

ಮಂಡ್ಯ: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ಹಾಗೂ ಹನಿ ನೀರಾವರಿ ಯೋಜನೆಗೆ ಸಹಾಯಧನ ಒದಗಿಸಲಾಗುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹನಿ ಹಾಗೂ ತುಂತುರು ನೀರಾವರಿಗೆ ರೈತರಿಂದ ಹೆಚ್ಚಿನ ಬೇಡಿಕೆ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
2021-22ನೇ ಸಾಲಿನಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಮೂಲಕ ಒಟ್ಟು 9204 ಹೆಕ್ಟೇರ್ ಪ್ರದೇಶಗಳಿಗೆ 2233 ಲಕ್ಷ ರೂ. ಸಹಾಯಧನ ನೀಡಲಾಗಿದೆ. 2022-23 ನೇ ಸಾಲಿನಲ್ಲಿ 6101 ಹೆಕ್ಟೇರ್ ಪ್ರದೇಶಗಳಿಗೆ 2423.57 ಲಕ್ಷ ರೂ. ಸಹಾಯಧನದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ ಎಂದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮೂರು ವರ್ಷಗಳಲ್ಲಿ ಎಲ್ಲ ಹಂಗಾಮುಗಳಲ್ಲಿ 55,571 ರೈತರು 47,286 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ. ಅಂತೆಯೇ, 2146 ಲಕ್ಷ ರೂ. ಮೊತ್ತದ ವಿಮೆ ಪರಿಹಾರ ಪಡೆದುಕೊಂಡಿದ್ದಾರೆ. 2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 30,998 ಸಂಖ್ಯೆಯ ರೈತರು 66.17 ಲಕ್ಷ ರೂ. ಮೊತ್ತದ ವಿಮೆ ಪಾವತಿಸಿದ್ದು, 26129 ಎಕರೆ ಪ್ರದೇಶದ ಬೆಳೆಗಳಿಗೆ ವಿಮೆ ನೋಂದಣಿ ಮಾಡಿದ್ದಾರೆ. ಬೆಳೆ ವಿಮೆ ರೈತರಿಗೆ ಹೆಚ್ಚು ಉಪಯುಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಾಯಿಸಿಕೊಳ್ಳುವಂತೆ ಅಧಿಕಾರಿಗಳು ಪ್ರೇರೇಪಿಸಬೇಕು ಎಂದರು.
ಒಂದು ಜಿಲ್ಲೆ ಒಂದು ಉತ್ಪನ್ನ ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಸಂಬಂಧ 147 ಅರ್ಜಿಗಳು ಸ್ವೀಕೃತವಾಗಿದ್ದು, 88 ಜನರಿಗೆ ಸಾಲ ಮಂಜೂರಾಗಿದೆ. ಜಿಲ್ಲೆಯಲ್ಲಿ ಬೆಲ್ಲಕ್ಕೆ ಒಳ್ಳೆಯ ಬೇಡಿಕೆ ಬರುವಂತೆ ಮಾಡಬೇಕು. ಇದಕ್ಕಾಗಿ ಒಂದು ಬ್ರಾೃಂಡ್ ಮಾಡಬೇಕು. ಈ ಬಗ್ಗೆ ಚಿಂತಿಸಿ ಈಗಾಗಲೇ ಸಾಲ ಮಂಜೂರು ಮಾಡಿರುವವರನ್ನು ತೊಡಗಿಸಿಕೊಳ್ಳಿ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಿ.ಮಂಜುನಾಥ್, ಕೃಷಿ ಇಲಾಖೆಯ ಉಪ ವಿಭಾಗ ನಿರ್ದೇಶಕರಾದ ಮಾಲತಿ, ಮಮತಾ, ಸಹಾಯಕ ನಿರ್ದೇಶಕಿ ಸೌಮ್ಯಶ್ರೀ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಶಿವಮ್ಮ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಸುಬ್ರಹ್ಮಣ್ಯ, ಲೀಡ್ ಬ್ಯಾಂಕ್ ಮ್ಯಾನೇಜರ್ ದೀಪಕ್, ರೇಷ್ಮೆ ಇಲಾಖೆಯ ಅಧಿಕಾರಿ ರಾಚಪ್ಪ ಇತರರಿದ್ದರು.