ಮಂಡ್ಯ: ದೇವಸ್ಥಾನ, ಕಲ್ಯಾಣ ಮಂಟಪ, ರೆಸಾರ್ಟ್ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಮದುವೆ ಆಯೋಜನೆಗೆ ಅವಕಾಶ ಕೊಡುವ ಮುನ್ನ ಸಂಬಂಧಪಟ್ಟವರು ವಧು, ವರರ ವಯೋಮಿತಿ ಧೃಡೀಕರಣಕ್ಕಾಗಿ ಇಲಾಖೆ ನಿಗದಿಪಡಿಸಿರುವ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಒಂದು ವೇಳೆ ಬಾಲ್ಯವಿವಾಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣವೇ ದೂರು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2022-23ನೇ ಸಾಲಿನಲ್ಲಿ ಇಲಾಖೆಯಿಂದ 56 ಬಾಲ್ಯ ವಿವಾಹ ತಡೆಯಲಾಗಿದೆ. 40 ಬಾಲ್ಯವಿವಾಹ ನಡೆದು ಎಫ್‌ಐಆರ್ ದಾಖಲಿಸಲಾಗಿದೆ. ಇಲಾಖೆಯ ಗಮನಕ್ಕೆ ಬಾರದಂತೆ ಇನ್ನೂ ಹೆಚ್ಚಿನ ಬಾಲ್ಯ ವಿವಾಹ ನಡೆದಿರುವ ಸಂಭವವಿರುತ್ತದೆ. ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಬಾಲ್ಯ ವಿವಾಹ ಪ್ರಕರಣ ವರದಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ಶಿಶು ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಗ್ರಾಮ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಬಾಲ್ಯವಿವಾಹ ನಡೆದಿರುವುದಿಲ್ಲ ಎಂದು ದೃಢೀಕರಿಸಬೇಕು. ಶಿಕ್ಷಣ ಇಲಾಖೆ ವತಿಯಿಂದ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಾಲ್ಯ ವಿವಾಹದ ದುಷ್ಪರಿಣಾಮ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ವಿಧಿಸಬಹುದಾದ ಶಿಕ್ಷೆಗಳ ಬಗ್ಗೆ ಸಹ ತಿಳಿಸಿ ಎಂದು ಸೂಚಿಸಿದರು.
ದೌರ್ಜನ್ಯ, ಅತ್ಯಾಚಾರ, ಆ್ಯಸಿಡ್ ದಾಳಿ ಸೇರಿದಂತೆ ಇನ್ನಿತರ ಪ್ರಕರಣಗಳಡಿ ಮಹಿಳೆಯರಿಗೆ ಚಿಕಿತ್ಸೆ ನೀಡುವ ಸಖಿ ಒನ್ ಸ್ಟಾಫ್ ಸೆಂಟರ್ ಮಿಮ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಅನುದಾನದಡಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು. ಸಖಿ ಒನ್ ಸ್ಟಾಫ್ ಸೆಂಟರ್‌ನಲ್ಲಿ ಸರ್ಕಾರ ಸೂಚಿಸಿರುವಂತೆ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಯಾವುದೇ ತೊಂದರೆ ಇದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ. ಸಂಕಷ್ಟಕ್ಕೊಳಗಾದ ಮಹಿಳೆಯರು, ಪರಿತ್ಯಕ್ತ, ನಿರ್ಗತಿಕ ಹೆಣ್ಣು ಮಕ್ಕಳಿಗೆ ಊಟ-ವಸತಿ ಮತ್ತು ಅಗತ್ಯ ಸೌಲಭ್ಯ ಒದಗಿಸುವ 4 ಸ್ವಾಧಾರ ಗೃಹ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಮಹಿಳೆಯರಿಗೆ ನಿಗದಿತವಾಗಿ ಆರೋಗ್ಯ ತಪಾಸಣೆ, ಮಾನಸಿಕ ತೊಂದರೆಗಳಿದ್ದಲ್ಲಿ ಸಮಾಲೋಚನೆಗಳನ್ನು ಏರ್ಪಡಿಸುವಂತೆ ತಿಳಿಸಿದರು.
ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ 2022-23ನೇ ಸಾಲಿನಲ್ಲಿ 102 ಪ್ರಕರಣಗಳು ದಾಖಲಾಗಿದೆ. 10 ಪ್ರಕರಣಗಳಿಗೆ ನ್ಯಾಯಾಲಯದಲ್ಲಿ ಡಿಐಆರ್ ಸಲ್ಲಿಸಿದ್ದು, ಸಮಾಲೋಚನೆಯಿಂದ 65 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. 27 ಪ್ರಕರಣಗಳು ಬಾಕಿ ಇದ್ದು, ಇವುಗಳನ್ನು ಇತ್ಯರ್ಥಗೊಳಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನಿ ಕುಮಾರಿ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು ಸಮಾಲೋಚನೆ ಮೂಲಕ ಯಾವ ರೀತಿ ಪರಿಹರಿಸಬಹುದು. ಕೆಲವು ಪ್ರಕರಣಗಳು ಸಮಾಲೋಚನೆ ವ್ಯಾಪ್ತಿಗೆ ಒಳಪಡದೇ ನೇರವಾಗಿ ನ್ಯಾಯಲಯದಲ್ಲಿ ಡಿಐಆರ್ ದಾಖಲೆಗೆ ಒಳಪಡಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಸಿದರು. ಮಾತ್ರವಲ್ಲದೆ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ವಿವಿಧ ರೀತಿಯ ಪ್ರಕರಣ ಪರಿಹರಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಲೀಡ್ ಬ್ಯಾಂಕ್ ಮ್ಯಾನೇಜರ್ ದೀಪಕ್, ಡಿಡಿಪಿಐ ಎಸ್.ಟಿ.ಜವರೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಇತರರಿದ್ದರು.