ಜಿಲ್ಲೆ

ಪ್ರತಿ ತಿಂಗಳಿಗೊಮ್ಮೆ ಸುರಕ್ಷತಾ ಸಮಿತಿ ಸಭೆ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ

reportermys

ಮಂಡ್ಯ: ಸರ್ಕಾರದ ನಿರ್ದೇಶನದಂತೆ ಪ್ರತಿ ತಿಂಗಳಿಗೊಮ್ಮೆ ರಸ್ತೆ ಸುರಕ್ಷತಾ ಸಮಿತಿ ಸಭೆ ಹಾಗೂ 15 ದಿನಗಳಿಗೊಮ್ಮೆ ವರ್ಚುವಲ್ ಸಭೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿಯನ್ನು ಮರು ರಚಿಸಬೇಕಿದೆ. ಈ ಹಿಂದೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಮುಂದೆ ಸರ್ಕಾರದ ಆದೇಶದಂತೆ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜಿಲ್ಲೆಯಲ್ಲಿ ಗುರುತಿಸುವ ಕಪ್ಪುಚುಕ್ಕೆ ಸ್ಥಳಗಳು ಹಾಗೂ ರಸ್ತೆ ಅಪಘಾತ ಪೀಡಿತ ವಲಯಗಳ ಸರಿಪಡಿಸುವಿಕೆಗೆ ಸೂಕ್ತ ಶಿಫಾರಸು ಮಾಡಬೇಕು. ಸದಸ್ಯರು ತಮ್ಮ ಹಂತದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಯೋಜನೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಬ್ಬು ಸಾಗಣೆ ಹೆಚ್ಚಾಗಿ ಟ್ರಾೃಕ್ಟರ್ ಹಾಗೂ ಎತ್ತಿನಗಾಡಿಯನ್ನು ಬಳಸಲಾಗುತ್ತದೆ. ಇವುಗಳಿಗೆ ರಿಫ್ಲೆಕ್ಟರ್ ಬಳಸುವುದು ಉತ್ತಮ. ಸಕ್ಕರೆ ಕಾರ್ಖಾನೆಯ ಸಹಯೋಗದೊಂದಿಗೆ ಎತ್ತಿನಗಾಡಿಗಳಿಗೆ ರಿಫ್ಲೆಕ್ಟರ್ ಅಳವಡಿಸಬೇಕು. ಹೆಚ್ಚು ಅಪಘಾತವಾಗುವ ಸ್ಥಳ ಹಾಗೂ ಹೆಚ್ಚು ಜನ ಅಪಘಾತದಲ್ಲಿ ಗಾಯವಾದ ಪ್ರಕರಣಗಳನ್ನು ವಿಶ್ಲೇಷಿಸಿ ಅಪಘಾತ ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಬೇಕು. ಅಪಘಾತವಾದ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ವರದಿಯನ್ನು ಇ.ಡಿ.ಎ.ಆರ್. ಮೂಲಕ ಆನ್‌ಲೈನ್‌ನಲ್ಲಿ ನೀಡಬೇಕಿದೆ. ಈ ಸಂಬಂಧ ಮೂರೂ ಇಲಾಖೆಯ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಭಾಸ್ಕರ್, ಡಿವೈಎಸ್ಪಿ ದೇವರಾಜು, ಡಿಡಿಪಿಐ ಜವರೇಗೌಡ, ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ ಇತರರಿದ್ದರು.