ಜಿಲ್ಲೆ

ಮೇ 5ರಿಂದ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆ ಜಿಲ್ಲೆಯಲ್ಲಿ ಮೇ 5 ರಿಂದ 17ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮೀಕ್ಷೆ ನಡಯುವ ಸಂದರ್ಭದಲ್ಲಿ ಜಿಲ್ಲೆಯ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಬಿಟ್ಟು ಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಕುಟುಂಬದ ಉಪಜಾತಿ, ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸೇರಿದಂತೆ ಸಮೀಕ್ಷೆಯಲ್ಲಿ ನೀಡಲಾಗಿರುವ ಎಲ್ಲ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆದು ಅಪಲೋಡ್ ಮಾಡಬೇಕಿರುತ್ತದೆ. ಇದಕ್ಕಾಗಿ ಏ.28ರಂದು ತಾಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಸುವ ಎಣಕೆದಾರರಿಗೆ ತರಬೇತಿ ನೀಡಲಾಗುವುದು. ಈ ಎಣಿಕೆದಾರರನ್ನಾಗಿ ಕಡ್ಡಾಯವಾಗಿ ಶಾಲಾ ಶಿಕ್ಷಕರನ್ನು ನೇಮಿಸಬೇಕು. ಪ್ರತಿ ಗುಂಪಿನ ಕೆಲಸವನ್ನು ಪರಿಶೀಲಿಸಲು ಮುಖ್ಯ ಶಿಕ್ಷಕರನ್ನು ನೇಮಕ ಮಾಡಬೇಕು. ಮೇ 17ರ ಸಮೀಕ್ಷೆ ಮುಗಿದ ನಂತರ ಮೇ 19 ರಿಂದ 22 ರವರೆಗೆ ಸ್ಥಳ ನಿಗದಿ ಮಾಡಿ ಶಿಬಿರ ನಡೆಸಲಾಗುವುದು. ಶಿಬಿರದಲ್ಲಿ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಸಮೀಕ್ಷೆಯಿಂದ ಬಿಟ್ಟುಹೋಗಿದ್ದಲ್ಲಿ ಸಂಪರ್ಕಿಸಿ ಸಮೀಕ್ಷೆಗೆ ಒಳಗಾಗಲೂ ಅವಕಾಶ ಸಹ ನೀಡಲಾಗಿದೆ ಎಂದು ಹೇಳಿದರು.

ಇದರ ಪೂರ್ವಭಾವಿಯಾಗಿ ಏ.25ರಂದು ಜಿಲ್ಲಾಮಟ್ಟದಲ್ಲಿ ಹಾಗೂ ಏ.28ರಂದು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕಂಪ್ಯೂಟರ್ ಹಾಗೂ ಸಮೀಕ್ಷೆಯ ಜ್ಞಾನವಿರುವ ಸಿಬ್ಬಂದಿ ನಿಯೋಜಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ, ಪೌರಾಯುಕ್ತೆ ಪಂಪಾಶ್ರೀ ಇತರರಿದ್ದರು.