ಮಂಡ್ಯ: ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯದಲ್ಲಿ ಫೆ.23 ಮತ್ತು 24ರಂದು ಮಾಘ ಶುದ್ಧ ಹುಣ್ಣಿಮೆ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಮಿಷಾಂಬ ದೇವರ ಮಾಘ ಶುದ್ಧ ಹುಣ್ಣಿಮೆಯ ಅಂಗವಾಗಿ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ಶೌಚಗೃಹ, ವಿದ್ಯುತ್ ವ್ಯವಸ್ಥೆ, ವಾಹನದ ಪಾರ್ಕಿಂಗ್ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಿ ಎಂದರು.
ನಿಮಿಷಾಂಬ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಬರುವುದರಿಂದ ದೇವಸ್ಥಾನ, ಬಸ್ ನಿಲ್ದಾಣ, ವಾಹನ ಪಾರ್ಕಿಂಗ್ ಬಳಿ ಕುಡಿಯುವ ನೀರಿಗಾಗಿ ಅಗತ್ಯ ಪ್ರಮಾಣದಲ್ಲಿ ಹೆಚ್ಚುವರಿ ನಲ್ಲಿಗಳನ್ನು ತಾತ್ಕಾಲಿಕವಾಗಿ ಅಳವಡಿಸಬೇಕು. ಟ್ಯಾಂಕರ್ ಮತ್ತು ಕ್ಯಾನ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು. ದೇವಸ್ಥಾನದ ವ್ಯಾಪ್ತಿಯ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ಬಟ್ಟೆ ಬದಲಾಯಿಸಲು ಅಗತ್ಯವಿರುವ ಕಡೆ ಕೊಠಡಿಗಳನ್ನು ತಾತ್ಕಾಲಿಕವಾಗಿ ಹಾಗೂ ಮುಖ್ಯವಾಗಿ ಮಹಿಳಾ ಭಕ್ತರಿಗೆ ಬಟ್ಟೆ ಬದಲಾಯಿಸಲು ಹೆಚ್ಚಿನ ಕೊಠಡಿಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಬೇಕು. ನಿರಂತರ ವಿದ್ಯುತ್ ವ್ಯವಸ್ಥೆ, ಮಹಿಳಾ ಸ್ನಾನಗೃಹದ ಬಳಿ ಮಹಿಳಾ ಆರಕ್ಷಕ ಸಿಬ್ಬಂದಿ ನೇಮಿಸಬೇಕು ಎಂದು ಹೇಳಿದರು.
ದೇವರ ದರ್ಶನ ಮತ್ತು ದೇವಸ್ಥಾನದ ಪೂಜಾ/ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಬೀದಿ ದೀಪಗಳನ್ನು ತ್ವರಿತವಾಗಿ ದುರಸ್ತಿಗೊಳಿಸಿ, ಅಗತ್ಯವಿರುವ ಕಡೆ ಪೋಕಸ್ ಲೈಟ್ ಹಾಗೂ ಹೆಚ್ಚುವರಿ ಜನರೇಟರ್ ವ್ಯವಸ್ಥೆ ಮಾಡಿ. ದೇವಸ್ಥಾನಕ್ಕೆ ಮೈಸೂರು, ಮಂಡ್ಯ ಮತ್ತು ಸುತ್ತಮುತ್ತಲಿನ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಮೈಸೂರು ಮತ್ತು ಶ್ರೀರಂಗಪಟ್ಟಣದಿಂದ ದೇವಾಲಯದ ಕಡೆಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ನಗರಾಭಿವೃದ್ಧಿ ಕೋಶಾಧಿಕಾರಿ ತುಷಾರಮಣಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ, ನಿಮಿಷಾಂಬ ದೇವಾಲಯದ ಇಒ ಸಿ.ಜಿ.ಕೃಷ್ಣ, ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್, ಶ್ರೀರಂಗಪಟ್ಟಣ ತಹಸೀಲ್ದಾರ್ ಪರಶುರಾಮ್ ಇತರರಿದ್ದರು.