ಮಂಡ್ಯ: ಈ ಬಾರಿಯ ಜಿ.20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ. ಈ ಹಿನ್ನೆಲೆಯಲ್ಲಿ ದೇಶ ಮತ್ತು ವಿದೇಶದ ಅತಿಥಿ ಗಣ್ಯರು ಆ.2ರಂದು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಲಿದ್ದು, ಅವರನ್ನು ಸ್ವಾಗತಿಸಲು ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ.3ರವರೆಗೆ ಮೈಸೂರಿನಲ್ಲಿ ಥಿಂಕ್.20 ಸಮಿಟ್ ನಡೆಯಲಿದೆ. ಇದರಲ್ಲಿ ಭಾಗವಹಿಸುವ 150ಕ್ಕೂ ಹೆಚ್ಚು ಗಣ್ಯರು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಅಂದು ಸಂಜೆ 6 ಗಂಟೆಗೆ ದರಿಯಾ ದೌಲತ್, 6.30ಕ್ಕೆ ಶ್ರೀರಂಗನಾಥಸ್ವಾಮಿ ದೇವಾಲಯ, 7.15ಕ್ಕೆ ಬೃಂದಾವನ ಗಾರ್ಡನ್‌ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರುಗಳು ಸ್ವಾಗತಿಸಿ ಅವರಿಗೆ ಭದ್ರತೆಯ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಅತಿಥಿಗಳು ಭೇಟಿ ನೀಡುವ ಸ್ಥಳಗಳಿಗೆ ಅಧಿಕಾರಿಗಳು ಮೊದಲೇ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸುತ್ತಮುತ್ತಲು ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಿ. ರಸ್ತೆಗಳನ್ನು ಸರಿಪಡಿಸಬೇಕು. ದರಿಯಾ ದೌಲತ್ ಹಾಗೂ ಕೆಆರ್‌ಎಸ್‌ನಲ್ಲಿ ಅತಿಥಿಗಳನ್ನು ಸ್ವಾಗತಿಸಲು ಉತ್ತಮ ಕಲಾ ತಂಡವನ್ನು ನಿಯೋಜಿಸಿ. ಅತಿಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ, ಕಾವೇರಿ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಇಂಜಿನಿಯರ್ ರಘುರಾಂ, ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.