ಜಿಲ್ಲೆ

ಸೇವಾವಲಯ ಮತದಾನದಿಂದ ವಂಚಿತರಾಗದಿರಲಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

ಮಂಡ್ಯ: ಅಗತ್ಯ ಸೇವಾ ವಲಯದಲ್ಲಿರುವವ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಅಂಚೆ ಮತದಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಚೆಸ್ಕಾಂ, ಕೆಎಸ್‌ಆರ್‌ಟಿಸಿ, ಆರೋಗ್ಯ, ಆರಕ್ಷಕ, ಅಗ್ನಿಶಾಮಕ, ಬಿಎಸ್‌ಎನ್‌ಎಲ್ನ ಅಧಿಕಾರಿ, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ವಿಧಾನಸಭಾ ಚುನಾವಣೆಯ ಮತದಾನದ ದಿನಾಂಕದಂದು ಚುನಾವಣೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಿಗೆ ಅಂಚೆ ಮತದಾನದ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಅಗತ್ಯ ಸೇವಾ ವಲಯಗಳಲ್ಲಿ ಅಂಚೆ ಪತ್ರದ ಮೂಲಕ ಮತದಾನ ಮಾಡಲು ಅಧಿಕಾರಿ ಹಾಗೂ ಸಿಬ್ಬಂದಿ ಹೆಸರು ಪಟ್ಟಿ ಮಾಡಿ ವಿವರ ಒದಗಿಸಲು ಇಲಾಖೆಯ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಮ್ಮ ಇಲಾಖೆಯಲ್ಲಿ ಮತದಾನದ ದಿನದಂದು ಸಿಬ್ಬಂದಿ ಕೆಲಸ ಅವಶ್ಯಕತೆಯನ್ನು ಗುರುತಿಸಿ ಅವರ ವಿವರವನ್ನು ಸಂಗ್ರಹಿಸಿ ಫಾರ್ಮ್ 12 ಅಥವಾ 12ಡಿ ವಿತರಿಸಿ ಭರ್ತಿ ಮಾಡಿ ಕ್ರೋಢೀಕರಿಸಿ ಸಲ್ಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಫೋಸ್ಟಲ್ ಬ್ಯಾಲೆಟ್‌ನ ನೋಡಲ್ ಅಧಿಕಾರಿ ಜಾನ್ಸನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.