ಜಿಲ್ಲೆ

ಉಂಡೆ ಕೊಬ್ಬರಿ ಖರೀದಿಗೆ ನೋಂದಣಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ ಸರ್ಕಾರ 11,750 ರೂ ಕನಿಷ್ಟ ಬೆಂಬಲ ಬೆಲೆ ಘೋಷಿಸಿದೆ. ಅದರಂತೆ ಅರ್ಹ ರೈತರು ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ಎಚ್. ಎನ್.ಗೋಪಾಲಕೃಷ್ಣ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ರೈತರಿಂದ ನೇರವಾಗಿ ನಾಫೆಡ್ ಸಂಸ್ಥೆ ಹಾಗೂ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತದವರು ಖರೀದಿ ಪ್ರಕ್ರಿಯೆ ನಡೆಸಲಿದ್ದಾರೆ. ನಾಗಮಂಗಲ ತಾಲೂಕಿನ ಕದಬಳ್ಳಿ ಹಾಗೂ ಕೆ.ಆರ್.ಪೇಟೆ ಎಪಿಎಂಸಿ ಆವರಣದಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.

ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಪ್ರತಿ ಎಕರೆಗೆ 6 ಕ್ವಿಂಟಾಲ್ನಂತೆ ಖರೀದಿಸಬೇಕು. ರೈತರ ನೋಂದಣಿ ಕಾಲಾವಧಿಯನ್ನು 45 ದಿನದವರೆಗೆ ಹಾಗೂ ಖರೀದಿ ಅವಧಿಯನ್ನು 6 ತಿಂಗಳವರೆಗೆ ನಿಗದಿಪಡಿಸಲಾಗಿದೆ. ನೋಂದಣಿ ಹಾಗೂ ಖರೀದಿಗೆ ಬೇಕಿರುವ ಸಿಬ್ಬಂದಿ ನೇಮಕ ಮಾಡಲು, ಖರೀದಿ ಕೇಂದ್ರಗಳಲ್ಲಿ ಅಗತ್ಯ ಮೂಲ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ರೈತರಿಗೆ ನೆರವಾಗುವ ರೀತಿ ಸಹಾಯವಾಣಿ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಪ್ರಮುಖವಾಗಿ ಜಿಲ್ಲೆಯ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ತೆಂಗಿನ ಮರಗಳಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 68,466 ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಮರಗಳಿದ್ದು, ಒಟ್ಟು ಉತ್ಪಾದನೆ 5096 ಲಕ್ಷ ಕಾಯಿಗಳಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಎಪಿಎಂಸಿ ಉಪನಿರ್ದೇಶಕ ಕೆ.ಶ್ರೀನಿವಾಸರೆಡ್ಡಿ, ಕೆ.ಆರ್.ಪೇಟೆ ಎಪಿಎಂಸಿ ಕಾರ್ಯದರ್ಶಿ ರಫಿಕ್ ಅಹಮ್ಮದ್, ನಾಗಮಂಗಲ ಎಪಿಎಂಸಿಯ ಸೋಮಶೇಖರ್, ರಜತ್, ಸತೀಶ್, ತೋಟಗಾರಿಕೆ ಇಲಾಖೆಯ ಚಂದು ಇತರರಿದ್ದರು.