ಜಿಲ್ಲೆ

ಚಿಕ್ಕರಸಿನಕೆರೆ ತಂಬಾಕು ಮುಕ್ತ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಘೋಷಣೆ

reportermys

ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್. ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತಂಬಾಕು ನಿಯಂತ್ರಣ ಕೋಶದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ನಗುವಿನಹಳ್ಳಿ, ಚಾಗಶೆಟ್ಟಹಳ್ಳಿಯನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಿಸಲಾಗಿದೆ. ಈ ಗ್ರಾಮಗಳು ನಿರಂತರವಾಗಿ ತಂಬಾಕು ಮುಕ್ತವಾಗಿರುವಂತೆ ನೋಡಿಕೊಳ್ಳಿ ಎಂದರು.

ಕೋಟ್ಪಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ ವಿದ್ಯಾಸಂಸ್ಥೆಯ ಆವರಣದಿಂದ 100 ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವಂತಿಲ್ಲ. ದಾಳಿ ನಡೆಸಿ ಇಂತಹ ಪ್ರಕರಣಗಳು ಕಂಡುಬಂದಲ್ಲಿ ನೊಟೀಸ್ ಜಾರಿ ಮಾಡಿ ಅಂಗಡಿಗಳ ಪರವಾನಗಿ ರದ್ದು ಮಾಡಿ. ಜಿಲ್ಲಾದ್ಯಂತ ಹುಕ್ಕಾಬಾರ್‌ಗಳನ್ನು ಪರಿಶೀಲಿಸಿ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತೆರವುಗೊಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ತಂಬಾಕು ಕೋಶದ ರಾಜ್ಯ ಸಮನ್ವಯ ಅಧಿಕಾರಿ ಜೇಯಲ್ ಥಾಮಸ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಬಹಳಷ್ಟು ಗ್ರಾಮಗಳು ತಂಬಾಕು ಮುಕ್ತವಾಗಿದೆ. ಅವುಗಳ ಜನಸಂಖ್ಯೆ ಕಡಿಮೆ ಇದ್ದು, 2200 ಜನಸಂಖ್ಯೆ ಹೊಂದಿರುವ ನಗುವಿನಹಳ್ಳಿ ಗ್ರಾಮ ತಂಬಾಕು ಮುಕ್ತವಾಗಿರುವುದು ರಾಷ್ಟ್ರಮಟ್ಟದಲ್ಲಿ ನಡೆದ ಕಾನ್ಫರೆನ್ಸ್‌ನಲ್ಲಿ ಚರ್ಚೆಯಾಗಿ ಮೆಚ್ಚುಗೆಗೆ ಪಾತ್ರವಾಯಿತು ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಲೋಕೇಶ್ ಮಾತನಾಡಿ, ಕಾರಾಗೃಹ ವಾಸಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉಚಿತ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡುವುದರ ಮೂಲಕ 82 ಕಾರಾಗೃಹ ವಾಸಿಗಳನ್ನು ವ್ಯಸನ ಮುಕ್ತರನ್ನಾಗಿಸಿದ್ದಾರೆ. ಈ ವಿಷಯ ಕೂಡ ಕಾನ್ಫರೆನ್ಸ್‌ನಲ್ಲಿ ಚರ್ಚೆಯಾಗಿ ಮೆಚ್ಚುಗೆಗೆ ಪಾತ್ರವಾಯಿತು ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಸರಸ್ವತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಡಿಡಿಪಿಐ ಎಸ್.ಟಿ.ಜವರೇಗೌಡ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಪಿ ಅಶ್ವಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಭವಾನಿ ಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಡಿ.ಸಂಜಯ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಡಾ.ಅನಿಲ್ಕುಮಾರ್, ತಿಮ್ಮರಾಜು, ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಐಎಂಎ ಅಧ್ಯಕ್ಷ ಡಾ.ಎಂ.ಮರೀಗೌಡ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.