ಜಿಲ್ಲೆ

ಜಿಲ್ಲೆಯಲ್ಲಿ 14,86,025 ಮತದಾರರು: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

ಮಂಡ್ಯ: ಜಿಲ್ಲೆಯಲ್ಲಿ ಜ.5ಕ್ಕೆ ಅನ್ವಯವಾಗುವಂತೆ 14,86,025 ಜನರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದ್ದು, ಹೆಸರು ಕೈಬಿಡುವ ಹಾಗೂ ಸೇರ್ಪಡೆ ಮಾಡುವ ಸಂಬಂಧ ಅರ್ಜಿ ಸ್ವೀಕೃತಿ ಮಾಡಿಕೊಳ್ಳಲಾಗುವುದು. ಮುಂದಿನ ಚುನಾವಣೆ ವೇಳೆಗೆ ಮತದಾರರಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಪೂರಕ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಗುರುವಾರ ಆಯೋಜಿಸಿದ್ದ ಮತದಾರರ ಪಟ್ಟಿ ಪ್ರಕಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2022 ನ.9ರಂದು ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 14,77,951 ಮತದಾರರಿದ್ದರು. 7,35,082 ಪುರುಷ ಹಾಗೂ 7,42,747 ಮಹಿಳೆಯರು, 122 ತೃತೀಯ ಲಿಂಗ ಮತದಾರರಿದ್ದರು. ಬಳಿಕ ಆಯೋಜಿಸಿದ್ದ ವಿಶೇಷ ಅಭಿಯಾನದಲ್ಲಿ 8074 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅದರಂತೆ ಪ್ರಸ್ತುತ 7,37,850 ಪುರುಷ, 7,48,051 ಮಹಿಳೆ ಹಾಗೂ 124 ತೃತೀಯ ಲಿಂಗ ಮತದಾರರಿದ್ದಾರೆ ಎಂದು ವಿವರಿಸಿದರು.

ಹೊಸದಾಗಿ ಪ್ರಕಟಿಸುವ ಪಟ್ಟಿಯ ಮಾಹಿತಿಯಂತೆ ಜಿಲ್ಲೆಯಲ್ಲಿ 13,532 ಪುರುಷ ಹಾಗೂ 9,127 ಮಹಿಳೆ, 1 ಇತರೆ ಅಂಗವಿಕಲ ಮತದಾರರಾಗಿದ್ದಾರೆ. ಅಂತೆಯೇ 631 ಪುರುಷ ಹಾಗೂ 23 ಮಹಿಳೆ ಸೇರಿದಂತೆ 654 ಸೇವಾ ಮತದಾರರಿದ್ದಾರೆ. ಇನ್ನು ಜಿಲ್ಲಾಡಳಿತದಿಂದ 1798 ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಅದರಂತೆ ರಾಜಕೀಯ ಪಕ್ಷಗಳು ಕೂಡ ಎಲ್ಲ ಮತಗಟ್ಟೆಗೆ ಬೂತ್ ಮಟ್ಟದ ಕಾರ್ಯಕರ್ತರನ್ನು ನೇಮಿಸಬೇಕಿದೆ. ಆದ್ದರಿಂದ ತ್ವರಿತವಾಗಿ ಪಟ್ಟಿ ಕೊಡುವಂತೆ ಸೂಚನೆ ನೀಡಿದರು.

ಕೆಲವೇ ದಿನದಲ್ಲಿ ವಿವಿ ಪ್ಯಾಟ್‌ಗಳು ಬರುವ ಸಾಧ್ಯತೆ ಇದೆ. ಬಳಿಕ ಮೊದಲ ಹಂತದ ಪರಿಶೀಲನೆ ಮಾಡಲಾಗುವುದು. ಪ್ರಮುಖವಾಗಿ 17 ವರ್ಷ ತುಂಬಿರುವ ಜಿಲ್ಲೆಯ ಯುವಕ, ಯುವತಿಯರು ನಮೂನೆ-6ರ ಮೂಲಕ ಅರ್ಜಿ ಸಲ್ಲಿಸಬೇಕು. ಅದನ್ನು ಹಂತ ಹಂತವಾಗಿ ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲಾಗುವುದು. 1950ರ ಜನತಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 14(ಬಿ) ಮತ್ತು ಸೆಕ್ಷನ್ 23ರಲ್ಲಿನ ಕಾನೂನು ತಿದ್ದುಪಡಿಗಳ ಅನುಸಾರ ಮತ್ತು ಮತದಾರರರ ನೋಂದಣಿಗಳ ನಿಯಮ 1960ರ ತಿದ್ದುಪಡಿಯಂತೆ ಪ್ರಸ್ತುತ ಜಾರಿಯಲ್ಲಿರುವ ಜ.1 ಅರ್ಹ ದಿನಾಂಕದ ಜತೆಗೆ ಏ.1, ಜು.1 ಮತ್ತು ಅ.1ರಂದು ಹೆಸರು ಸೇರ್ಪಡೆಗೆ ಅವಕಾಶವಿದೆ. ಈ ಅವಧಿಯಲ್ಲಿ 18 ವರ್ಷ ತುಂಬಿರುವ ಮತದಾರರನ್ನು ಪಟ್ಟಿಗೆ ಸೇರಿಸಿಕೊಳ್ಳಬಹುದು. ಪ್ರಸ್ತುತ ಜಿಲ್ಲೆಯಲ್ಲಿ 17 ವರ್ಷ ಮೇಲ್ಪಟ್ಟ 1,177 ಜನರಿಂದ ನಮೂನೆ-6ರ ಅರ್ಜಿ ಸ್ವೀಕರಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಸ್ವಾಮಿಗೌಡ, ಚುನಾವಣಾ ಶಿರಸ್ತೆದಾರ್ ದೀಪಕ್ ಸೇರಿದಂತೆ ರಾಜಕೀಯ ಪಕ್ಷದ ಪ್ರತಿನಿಧಿಗಳಿದ್ದರು.