ಜಿಲ್ಲೆ

ಮೀನುಗಾರಿಕೆಯಿಂದ ಉತ್ತಮ ಆದಾಯ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

reportermys

ಮಂಡ್ಯ: ಉಪಕಸುಬಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು. ಆದ್ದರಿಂದ ರೈತರು ಮೀನುಗಾರಿಕೆ ಯೋಜನೆಯ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ 2022-23ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2022-23 ನೇ ಸಾಲಿನ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಅನುಮೋದನೆ ನೀಡಿ ಜನವರಿ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸುವಂತೆ ಸೂಚನೆ ನೀಡಿದರು.

ಮೀನುಗಾರಿಕೆಗೆ ಸಂಬಂಧಿಸಿದಂತೆ ಮೀನು ಮರಿ ಸಾಕಣೆ, ಶೀತ ಸಂಗ್ರಹಗಾರ ಯೋಜನೆ, ಮೀನುಗಳನ್ನು ಬೆಳೆಸುವುದು ಸೇರಿದಂತೆ ಹದಿನಾರು ತರಹದ ಕಾರ್ಯಕ್ರಮಗಳಿವೆ. ಸುಮಾರು ಒಟ್ಟು 256 ಯೂನಿಟ್ಸ್‌ಗಳಿಗೆ ಸಂಬಂಧಿಸಿದಂತೆ ಅರ್ಜಿ ಬಂದಿವೆ. ಜಿಲ್ಲೆಗೆ ಕೊಟ್ಟಿರುವ ಗುರಿಯ ಪ್ರಕಾರ 9.12 ಕೋಟಿ ರೂ. ಯೋಜನಾ ವೆಚ್ಚ ನಿಗದಿಯಾಗಿದೆ. 4.67 ಕೋಟಿ ರೂ. ಸಹಾಯಧನ ನೀಡಲು ಅವಕಾಶವಿದೆ. ವಿವಿಧ ಕಾರ್ಯಕ್ರಮಗಳಡಿ ಸ್ವೀಕರಿಸಲಾಗಿರುವ ಬೇಡಿಕೆಗೆ ಸಂಬಂಧಿಸಿದಂತೆ 27 ಕೋಟಿ ರೂ. ಯೋಜನೆ ಹಾಗೂ ಸಬ್ಸಿಡಿ 14.67 ಕೋಟಿ ರೂ. ಬೇಕಾಗುತ್ತದೆ. ನಿಗದಿ ಮಾಡಿರುವ ಗುರಿಯನ್ನು ಪೂರ್ಣಗೊಳಿಸಿ ಹೆಚ್ಚುವರಿ ಬೇಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

ಪ್ರಗತಿಪರ ಮೀನು ಕೃಷಿಕ ಸುರೇಶ್ ಕಾರೇಪುರ ಅವರು ಸುಮಾರು ಎರಡೂವರೆ ಎಕರೆ ಜಮೀನಿನಲ್ಲಿ ಮೀನು ಸಾಕಣೆಯಲ್ಲಿ ತೊಡಗಿ ಉತ್ತಮವಾದ ಆದಾಯವನ್ನು ಮಾಡುತ್ತಿದ್ದಾರೆ. ರೈತರು ಕೃಷಿಗೆ ಯೋಗ್ಯವಲ್ಲದ ಸವಳು ನೆಲದಲ್ಲಿ ಮೀನು ಸಾಕಣೆಯಲ್ಲಿ ತೊಡಗಿಸಿಕೊಂಡರೆ ವರ್ಷಕ್ಕೆ ಹೆಚ್ಚಿನ ಲಾಭಗಳಿಸಬಹುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಂಜೀವಪ್ಪ, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಲೀಡ್ ಬ್ಯಾಂಕ್ ಮ್ಯಾನೇಜರ್ ಎಂ.ಪಿ.ದೀಪಕ್, ಮೀನುಗಾರಿಕೆ ಉಪ ನಿರ್ದೇಶಕ ಮಂಜೇಶ್, ಅಧಿಕಾರಿ ಲೋಕೇಶ್, ವಿ.ಸಿ ಫಾರಂ ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಡಾ.ಮಹೇಶ್ ಇತರರಿದ್ದರು.